ಕಾಸರಗೋಡು: ಕಾಂಞಂಗಾಡ್‍ನಲ್ಲಿ ಡಿವೈಎಫ್‍ಐ ಕಾರ್ಯಕರ್ತನೋರ್ವನನ್ನು ತಂಡವೊಂದು ಆಕ್ರಮಿಸಿ ಕೊಲೆಗೈದ ಘಟನೆ ಡಿ.23 ರಂದು ರಾತ್ರಿ ನಡೆದಿದೆ. ಬೈಕ್‍ನಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದಾಗ ಮುಸ್ಲಿಂ ಲೀಗ್ ಕಾರ್ಯಕರ್ತರು ಆಕ್ರಮಿಸಿ ಹತ್ಯೆ ಮಾಡಿದ್ದಾಗಿ ಆರೋಪಿಸಲಾಗಿದೆ. ಇದೇ ಸಂದರ್ಭದಲ್ಲಿ ಯೂತ್ ಲೀಗ್ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಞಂಗಾಡ್ ಹಳೆ ಕಡಪ್ಪುರ ಮಸೀದಿ ಪರಿಸರದ ನಿವಾಸಿ ಕುಂಞಬ್ದುಲ್ಲ ದಾರಿಮಿ ಅವರ ಪುತ್ರ ಅಬ್ದುಲ್ ರಹ್ಮಾನ್ ಯಾನೆ ಔಫ್(32) ಅವರನ್ನು ಕೊಲೆ ಮಾಡಲಾಗಿದೆ. ಡಿವೈಎಫ್‍ಐ ಕಲ್ಲೂರಾವಿ ಯೂನಿಟ್ ಸದಸ್ಯರಾಗಿದ್ದ ಅಬ್ದುಲ್ ರಹ್ಮಾನ್ ಎಸ್.ವೈ.ಎಸ್. ಹಾಗು ಎಸ್.ಎಸ್.ಎಫ್. ಕಾರ್ಯಕರ್ತರೂ ಆಗಿದ್ದರು. ಆಲಂಪಾಡಿ ಉಸ್ತಾದ್ ಅವರ ಮೊಮ್ಮಗನಾದ ಇವರು ಕೊಲ್ಲಿಯಿಂದ ಆರು ತಿಂಗಳ ಹಿಂದೆ ಊರಿಗೆ ಬಂದಿದ್ದರು.
ಡಿ.23 ರಂದು ರಾತ್ರಿ 10.30 ಕ್ಕೆ ಅಬ್ದುಲ್ ರಹ್ಮಾನ್ ಸ್ನೇಹಿತರಾದ ಶುಹೈಬ್, ರಹೀಂ, ಅಸ್ಲಾಂ ಬೈಕ್‍ನಲ್ಲಿ ಸಾಗುತ್ತಿದ್ದಾಗ ಕಲ್ಲೂರಾವಿ ಮುಂಡತ್ತೋಡ್ ಬಾವನಗರದಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಆಕ್ರಮಿಸಿದರೆಂದು ಆರೋಪಿಸಲಾಗಿದೆ. ಆಕ್ರಮಣದಲ್ಲಿ ಗಂಭೀರ ಗಾಯಗೊಂಡ ಅಬ್ದುಲ್ ರಹ್ಮಾನ್ ಅವರನ್ನು ಸ್ಥಳೀಯರು ಕಾಂಞಂಗಾಡ್‍ನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಘಟನೆ ಬಗ್ಗೆ ಜತೆಗಿದ್ದ ಶುಹೈಬ್ ನೀಡಿದ ದೂರಿನಂತೆ ಯೂತ್ ಲೀಗ್ ಕಾಂಞಂಗಾಡ್ ಮಂಡಲ ಕಾರ್ಯದರ್ಶಿ ಇರ್ಷಾದ್ ಹಾಗು ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಹೊಸದುರ್ಗ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಇರ್ಷಾದ್ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಷಾದ್‍ಗೆ ಸಿಪಿಎಂ ಕಾರ್ಯಕರ್ತರು ಹಲ್ಲೆ ಮಾಡ್ದಿದ್ದಾಗಿ ಆರೋಪಿಸಲಾಗಿದೆ.
ಅಬ್ದುಲ್ ರಹ್ಮಾನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಗರ್ಭಿಣಿಯಾಗಿರುವ ಪತ್ನಿಯನ್ನು ಡಾಕ್ಟರ್‍ಗೆ ಕಾಣಿಸಲು ಆಸ್ಪತ್ರೆಗೆ ಕೊಂಡೊಯ್ಯಲು ಗೆಳೆಯರಿಂದ ಹಣ ಸಾಲ ಪಡೆದು ಬೈಕ್‍ನಲ್ಲಿ ಸಂಚರಿಸುತ್ತಿದ್ದಾಗ ಹತ್ಯೆ ಮಾಡಲಾಗಿದೆ.
ಹರತಾಳ : ಅಬ್ದುಲ್ ರಹ್ಮಾನ್ ಹತ್ಯೆಯನ್ನು ಪ್ರತಿಭಟಿಸಿ ಕಾಂಞಂಗಾಡು ನಗರ ವ್ಯಾಪ್ತಿಯಲ್ಲಿ ಹರತಾಳ ನಡೆಯಿತು. ಅಂಗಡಿಮುಗ್ಗಟ್ಟುಗಳು ಮುಚ್ಚಿದ್ದು, ಬಸ್ ಸಹಿತ ವಾಹನಗಳು ಎಂದಿನಂತೆ ಸಂಚರಿಸಿತು. ಸ್ಥಳದಲ್ಲಿ ಬಿಗು ಪೆÇಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.