ನವದೆಹಲಿ: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಹೂಡಿಕೆದಾರರಿಗೆ ₹ 6,300 ಕೋಟಿಗೂ ಅಧಿಕ ಮೊತ್ತ ವಂಚಿಸಿ, ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಅಗ್ರಿ ಗೋಲ್ಡ್ ಸಮೂಹದ ಮೂವರು ಪ್ರವರ್ತಕರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.
ಅವ್ವ ವೆಂಕಟರಾಮರಾವ್, ಅವ್ವ ವೆಂಕಟ ಎಸ್.ನಾರಾಯಣರಾವ್ ಹಾಗೂ ಅವ್ವ ಹೇಮಸುಂದರ ವರಪ್ರಸಾದ್ ಎಂಬುವವರೇ ಬಂಧಿತರು. ಇವರು ಈ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
'ಮೂವರನ್ನು ಹೈದರಾಬಾದ್‌ನಲ್ಲಿರುವ ವಿಶೇಷ ಕೋರ್ಟ್‌ಗೆ ಮಂಗಳವಾರ ಹಾಜರುಪಡಿಸಲಾಯಿತು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದೂ ಇ.ಡಿ ಅಧಿಕಾರಿಗಳು ಹೇಳಿದ್ದಾರೆ.
ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಮೂವರ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವಿವಿಧೆಡೆ ಎಫ್‌ಐಆರ್ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಇ.ಡಿ, ವಿಜಯವಾಡ, ಹೈದರಾಬಾದ್‌ಗಳಲ್ಲಿರುವ ಕಂಪನಿಯ ಪ್ರವರ್ತಕರು ಹಾಗೂ ಲೆಕ್ಕಪರಿಶೋಧಕರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು. ಈ ವೇಳೆ, ₹ 22 ಲಕ್ಷ ನಗದು, ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಲಾಯಿತು ಎಂದು ಇ.ಡಿ ಮೂಲಗಳು ಹೇಳಿವೆ.
ಒಡಿಶಾ, ತಮಿಳುನಾಡು, ಮಹಾರಾಷ್ಟ್ರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಛತ್ತೀಸಗಡದಲ್ಲಿ ಸಹ ಜನರು ಈ ಕಂಪನಿಯಲ್ಲಿ ಹೂಡಿಕೆ ಮಾಡಿ, ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.