ಬದಿಯಡ್ಕ: ಬದಿಯಡ್ಕದ ಪ್ರಖ್ಯಾತ ವೈದ್ಯ ಡಾ. ಮುಹಮ್ಮದ್ ಕುಂಞ (68) ಬುಧವಾರ ಬೆಳಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಶ್ವಾಸಕೋಶದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅಲ್ಪಕಾಲದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದರು.
ಕಾಞಂಗಾಡು ಕೋಳವಯಲ್ ನಿವಾಸಿಯಾಗಿದ್ದ ಅವರು 1989ನೇ ಇಸವಿಯಲ್ಲಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಬದಿಯಡ್ಕಕ್ಕೆ ಆಗಮಿಸಿದ್ದರು. ಆ ವೇಳೆ ಅವರು ಯಾವುದೇ ಸಮಯದಲ್ಲಿ ರೋಗಿಗಳ ಚಿಕಿತ್ಸೆಗಾಗಿ ಲಭ್ಯರಿದ್ದರು. ಜನರೊಳಗಿನ ಉತ್ತಮ ಒಡನಾಟದಿಂದ ಅವರು ಪ್ರಖ್ಯಾತರಾಗಿದ್ದರು. ಬದಿಯಡ್ಕ, ಪೆರ್ಲ, ಮುಳಿಯಾರು, ಕರಿವೆಳ್ಳೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಅವರು ಪ್ರಧಾನ ವೈದ್ಯಾಧಿಕಾರಿಯಾಗಿ ಸೇವೆಸಲ್ಲಿಸಿದ್ದರು. ಬದಿಯಡ್ಕ ಗ್ರಾಮಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಅವರ ಮನೆಯಿದ್ದು, ಒಂದು ಕೋಣೆಯನ್ನು ರೋಗಿಗಳ ಚಿಕಿತ್ಸೆಗಾಗಿ ಬಳಸುತ್ತಿದ್ದರು. ರಾತ್ರಿವೇಳೆಯಲ್ಲಿಯೂ ಉತ್ತಮ ಸೇವೆಯನ್ನು ಅವರು ನೀಡುತ್ತಿದ್ದರು. ಅವರಿಗೆ ಪತ್ನಿ, ಮೂವರು ಮಕ್ಕಳು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.