ನವದೆಹಲಿ: ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಾಪ್ಪನ್ ಅವರ ವಿರುದ್ಧದ ತನಿಖೆ ವೇಳೆ 'ಆಘಾತಕಾರಿ ಅಂಶಗಳು' ಪತ್ತೆಯಾಗಿವೆ ಎಂದು ಉತ್ತರ ಪ್ರದೇಶ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಹಾಥರಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ವರದಿ ಮಾಡಲು ತೆರಳುತ್ತಿದ್ದ ಸಿದ್ದಿಕಿ ಸೇರಿ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಅ.5ರಂದು ಬಂಧಿಸಿದ್ದರು. ಇವರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಪರ್ಕವಿದೆ ಎನ್ನುವ ಆರೋಪದಡಿ ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ (ಯುಎಪಿಎ) ಕಠಿಣ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು.
'ಕೇರಳ ಮೂಲದ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಕಾಪ್ಪನ್ ಹೇಳಿದ್ದರು. ಆದರೆ, ಪತ್ರಿಕೆ ಎರಡು ವರ್ಷಗಳ ಹಿಂದೆಯೇ ಸ್ಥಗಿತವಾಗಿದೆ' ಎಂದು ಸರ್ಕಾರವು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠಕ್ಕೆ ತಿಳಿಸಿತು.
ಕಾಪ್ಪನ್ ಅವರ ಬಂಧನವನ್ನು ಪ್ರಶ್ನಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯುಜೆ) ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತು. 'ಇಲ್ಲಿಯವರೆಗೂ ಕಾಪ್ಪನ್ ವಿರುದ್ಧ ನಡೆಸಿದ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಪತ್ತೆಯಾಗಿವೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದರು.
'ಕಾಪ್ಪನ್ ಅವರು ಪಿಎಫ್‌ಐ ಕಚೇರಿ ಕಾರ್ಯದರ್ಶಿ. ಸ್ಥಗಿತಗೊಂಡಿದ್ದ ದಿನಪತ್ರಿಕೆ ಗುರುತಿನ ಚೀಟಿ ತೋರಿಸಿ, ಹಾಥರಸ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಆಗಮಿಸಿದ್ದರು' ಎಂದು ಉತ್ತರ ಪ್ರದೇಶ ಸರ್ಕಾರವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿತ್ತು. ಪ್ರತಿಯಾಗಿ ಹೇಳಿಕೆ ದಾಖಲಿಸಿದ್ದ ಕೆಯುಡಬ್ಲ್ಯುಜೆ, ಪ್ರಕರಣದ ತನಿಖೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿತ್ತು.
'ಸುಪ್ರೀಂ ಕೋರ್ಟ್‌ನಲ್ಲೇ ಈ ಪ್ರಕರಣವನ್ನು ವಾದಿಸಲು ಇಚ್ಛಿಸುತ್ತೇನೆ. ಅರ್ಜಿದಾರರು ಈ ಪ್ರಕರಣದಲ್ಲಿ ಕಾಪ್ಪನ್ ಅವರ ಪತ್ನಿ ಹಾಗೂ ಇತರರನ್ನು ಸೇರಿಸಲಿದ್ದಾರೆ' ಎಂದು ಕೆಯುಡಬ್ಲ್ಯುಜೆ ಪರ ವಕೀಲ ಕಪಿಲ್ ಸಿಬಲ್ ಹೇಳಿದರು. ಅರ್ನಬ್ ಗೋಸ್ವಾಮಿ ಅವರ ವಿರುದ್ಧದ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಆಧರಿಸಿ ವಾದಿಸುವುದಾಗಿ ಸಿಬಲ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಕಾನೂನಿನಂತೆ ವಿಚಾರಣೆ ನಡೆಸುತ್ತೇವೆ. ಇದರ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಬೇಕಿತ್ತು' ಎಂದಿತು. ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿತು.