ನವದೆಹಲಿ: 'ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರೆ ಮಾತ್ರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತೇವೆ' ಎಂದು ಅಖಿಲ ಭಾರತ ಕಿಸಾನ್ ಸಭಾದ (ಎಐಕೆಎಸ್) ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
'ಕಾಯ್ದೆ ರದ್ದುಗೊಳಿಸಬೇಕೆಂಬ' ನಿಲುವಿನಿಂದ ರೈತರು ಹಿಂದೆ ಸರಿಯದ ಕಾರಣ, ಪ್ರತಿಭಟನಾಕಾರರು ಮತ್ತು ಸರ್ಕಾರದ ನಡುವೆ ಗುರುವಾರ ನಡೆದ ನಾಲ್ಕನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಐದನೇ ಸುತ್ತಿನ ಮಾತುಕತೆ ಆರಂಭವಾಗುವ ಮುನ್ನ ಮಾತನಾಡಿದ ಎಐಕೆಎಸ್ ಸಂಘಟನೆಯ ವಿತ್ತ ಕಾರ್ಯದರ್ಶಿ ಕೃಷ್ಣಪ್ರಸಾದ್ 'ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕಾಯ್ದೆಗಳನ್ನು ರದ್ದುಪಡಿಸಿದರೆ ಮಾತ್ರ, ಪ್ರತಿಭಟನೆ ನಿಲ್ಲಿಸುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
'ಸರ್ಕಾರ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾವನೆಯನ್ನು ಸಂಸತ್ತಿಗೆ ಕೊಂಡೊಯ್ಯಬೇಕು. ಸದನ ಸಮಿತಿಯ ಎದುರು ಇಟ್ಟು ಚರ್ಚಿಸಬೇಕು. ಕಾಯ್ದೆಗಳನ್ನು ರದ್ದುಗೊಳಿಸುವುದು ಬಿಟ್ಟು ಬೇರೆ ಯಾವುದಕ್ಕೂ ನಾವು ಮಣಿಯುವುದಿಲ್ಲ' ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಇದೇ ವೇಳೆ 'ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ನಾಯಕರು, ಕಾರ್ಯಕರ್ತರನ್ನು ಬೆದರಿಸಲು ಮೋದಿ ಸರ್ಕಾರ ದೆಹಲಿ ಪೊಲೀಸರನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಹೇಡಿತನ ಪ್ರದರ್ಶಿಸುತ್ತಿದೆ. ಇದನ್ನು ಎಐಕೆಎಸ್ ಬಲವಾಗಿ ಖಂಡಿಸುತ್ತದೆ' ಎಂದು ರೈತ ಸಂಘ ಟ್ವೀಟ್ ಮಾಡಿದೆ.
ಹಾಗೆಯೇ, 'ಭಾರತದಾದ್ಯಂತ ಪ್ರತಿಭಟನಾ ನಿರತ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಸರ್ಕಾರ ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು' ಎಂದು ಎಐಕೆಎಸ್ ಒತ್ತಾಯಿಸಿದೆ.