ಕಾಸರಗೋಡು: ಕಾಸರಗೊಡು ಜಿಲ್ಲೆಯಲ್ಲಿ ಇತಿಮಿತಿಗಳ ನಡುವೆ ನಡೆಯುತ್ತಿದ್ದ ಚುನಾವಣೆ ವಿಭಾಗದ ಚುನಾವಣೆ ಪ್ರಕ್ರಿಯೆಗಳಿಗೆ ಶಾಶ್ವತ ಪರಿಹಾರ ರೂಪದಲ್ಲಿ ನೂತನ ವೇರ್ ಹೌಸ್ ಕಟ್ಟಡ ನಿರ್ಮಾಣಗೊಂಡಿದೆ.
ಕಾಸರಗೋಡು ಸಿವಿಲ್ ಸ್ಟೇಷನ್ ಆವರಣದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಹಿಂಬದಿ ನಿರ್ಮಿಸಲಾದ ಎರಡು ಅಂತಸ್ತಿನ ವಿದ್ಯುನ್ಮಾನ ಮತಯಂತ್ರ ವೇರ್ ಹೌಸ್ ಡಿ.21ರಂದು ಉದ್ಘಾಟನೆಗೊಳ್ಳಲಿದೆ. ಈ ವರೆಗೆ ಇತಿಮಿತಿಗಳ ನಡುವೆ ಮತಯಂತ್ರಗಳ ದಾಸ್ತಾನು ಸಹಿತ ಚಟುವಟಿಕೆಗಳನ್ನು ನಡೆಸಬೇಕಿತ್ತು. ನೂತನ ಕಟ್ಟಡ ನಿರ್ಮಾಣ ಮೂಲಕ ವಿಸ್ತೃತ ಸೌಲಭ್ಯ ಒದಗಿದೆ. ಇ.ವಿ.ಎಂ., ಕಂಟ್ರೋಲ್ ಯೂನಿಟ್, ವಿವಿಪಾಟ್ ಸಹಿತ ಸಾಮಾಗ್ರಿಗಳ ದಾಸ್ತಾನಿಗೆ ಇಲ್ಲಿ ಪ್ರತ್ಯೇಕ ಸೌಲಭ್ಯಗಳಿವೆ. ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಸಾಮಾಗ್ರಿಗಳ ದಾಸ್ತಾನು ಸಾಧ್ಯವಾಗಲಿದೆ.
ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ತಪಾಸಣೆ ನಡೆಸಲು ಮೇಲಂತಸ್ತಿನ ಸಭಾಂಗಣದಲ್ಲಿ ಸೌಲಭ್ಯ ಏರ್ಪಡಿಸಲಾಗುವುದು ಎಂದು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್ ತಿಳಿಸಿದರು. ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಜಿಲ್ಲೆಗೆ ಅಗತ್ಯವಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಪಡೆಯಲಿ ಸಿಬ್ಬಂದಿ ತೆರಳಲಿದ್ದಾರೆ ಎಂದೂ, ಪೆÇಲೀಸ್ ಭದ್ರತೆಯೊಂದಿಗೆ ಇವನ್ನು ಕಂಟೈನರ್ ಮೂಲಕ ತರಲಾಗುವುದು ಎಂದೂ ಅವರು ತಿಳಿಸಿದರು. ಈ ರೀತಿ ತರಲಾಗುವ 2200 ವಿವಿಪಾಟ್, 2000 ಕಂಟ್ರೋಲ್ ಯೂನಿಟ್, 2000 ಬಾಲೆಟ್ ಯೂನಿಟ್ ಇತ್ಯಾದಿ ನೂತನ ವೇರ್ ಹೌಸ್ ನಲ್ಲಿ ದಾಸ್ತಾನು ಇರಿಸಲಾಗುವುದು.
ಸರಿಸುಮಾರು 2 ಕೋಟಿ ರೂ. ನ ಯೋಜನೆಯಲ್ಲಿ 9 ತಿಂಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ವೇರ್ ಹೌಸ್ ನಿರ್ಮಾಣ ನಡೆದಿದೆ.
ನಾಳೆ ಉದ್ಘಾಟನೆ:
ನಾಳೆ( ಡಿ.21)ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆಯುವ ಸಮಾರಂಭದಲ್ಲಿ ಪ್ರಧಾನ ಚುನಾವಣೆ ಅಧಿಕಾರಿ ಟಿಕಾರಾಂ ಮೀಣ ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸುವರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಚುನಾವಣೆ ವಿಭಾಗ ಸಿಬ್ಬಂದಿ ಮೊದಲಾದವರು ಭಾಗವಹಿಸುವರು.