ತಿರುವನಂತಪುರ: ಮುಂದಿನ ನಾಲ್ಕು ತಿಂಗಳವರೆಗೆ ಉಚಿತ ಪಡಿತರ ಆಹಾರ ಕಿಟ್‍ಗಳ ವಿತರಣೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಹೇಳಿರುವರು. ರಾಜ್ಯ ಸರ್ಕಾರದ 100 ದಿನಗಳ ಕಾರ್ಯಕ್ರಮದ ಎರಡನೇ ಹಂತವನ್ನು ನಿನ್ನೆ ಘೋಷಿಸಿದ್ದು ಈ ಬಗ್ಗೆ ಮುಖ್ಯಮಂತ್ರಿ ಮಾಹಿತಿ ನೀಡಿದರು.
ನೂರು ದಿನಗಳ ಕಾರ್ಯಕ್ರಮದ ಎರಡನೇ ಹಂತದಲ್ಲಿ 50,000 ಜನರಿಗೆ ಉದ್ಯೋಗ ಒದಗಿಸಲಾಗುವುದು. 2021 ರಿಂದ ಕಲ್ಯಾಣ ಪಿಂಚಣಿಗಳನ್ನು 100 ರೂ.ನಿಂದ 1500 ರೂ.ಗೆ ಹೆಚ್ಚಿಸಲಾಗುವುದು. 20 ಮಾವೇಲಿ ಮಳಿಗೆಗಳನ್ನು ಸೂಪರ್ ಮಾರ್ಕೆಟ್‍ಗಳಾಗಿ ಭಡ್ತಿಗೊಳಿಸಲಾಗುವುದು. ಜೊತೆಗೆ ಐದು ಸೂಪರ್ ಮಾರ್ಕೆಟ್‍ಗಳನ್ನು ಹೊಸತಾಗಿ ತೆರೆಯಲಾಗುವುದು ಎಂದು ಸಿಎಂ ಹೇಳಿದರು.
ಎರಡನೇ ಹಂತವು, ಈಗಿನ 100 ದಿನಗಳ ಕಾರ್ಯಕ್ರಮದ ಮೊದಲ ಹಂತದ ಮುಂದುವರಿಕೆಯಾಗಿದೆ. ಕೊರೊನಾ ಸೋಂಕಿನ ಸಂದರ್ಭ ಕೇರಳದಲ್ಲಿ ಯಾರೂ ಹಸಿವಿನಿಂದ ಬಳಲಲು ಅವಕಾಶ ನೀಡಿಲ್ಲ. ಮೊದಲ ಹಂತದಲ್ಲಿ 122 ಯೋಜನೆಗಳು ಪೂರ್ಣಗೊಂಡಿವೆ. ಕೃಷಿ ಉತ್ಪನ್ನಗಳಿಗೆ ಮೂಲ ಬೆಲೆಗಳನ್ನು ಘೋಷಿಸಲು ಸಾಧ್ಯವಾಯಿತು. ಆಹಾರ ಕಿಟ್‍ಗಳ ವಿತರಣೆಗೆ ಸಾಕಷ್ಟು ಬೆಂಬಲವಿದೆ ಎಂದು ಪಿಣರಾಯಿ ವಿಜಯನ್ ಹೇಳಿರುವರು.