ಕಾಸರಗೋಡು: ಭಾರತೀಯ ಚುನಾವಣೆ ಆಯೋಗ ನೇಮಿಸಿರುವ ಮತದಾತರ ಪಟ್ಟಿ ನಿರೀಕ್ಷಕ ಕೆ.ಗೋಪಾಲಕೃಷ್ಣ ಭಟ್ ಅವರು ಇಂದು ಕಾಸರಗೋಡು ಜಿಲ್ಲೆಗೆ ಆಗಮಿಸುವರು.
2 ದಿನಗಳ ಅಧಿಕೃತ ಸಂದರ್ಶನವನ್ನು ಅವರು ನಡೆಸುವರು. ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ನಡೆಯುವ ಮತದಾತರ ಪಟ್ಟಿ ನವೀಕರಣ ಅಂಗವಾಗಿ ಅವರ ಭೇಟಿ ನಡೆಯಲಿದೆ.
ಜಿಲ್ಲೆಯ ವಿವಿಧ ಇಲೆಕ್ಟರಲ್ ರೆಜಿಸ್ಟ್ರೇಷನ್ ಅಧಿಕಾರಿ ಅವರ ಕಾರ್ಯಾಲಯಗಳನ್ನು ಅವರು ಸಂದರ್ಶಿಸಿ ಇಲೆಕ್ಟರಲ್ ರೆಜಿಸ್ಟ್ರೇಷನ್ ಆಫೀಸರ್, ಇಲೆಕ್ಷನ್ ಡೆಪ್ಯೂಟಿ ತಹಸೀಲ್ದಾರ್, ಬೂತ್ ಲೆವೆಲ್ ಆಪೀಸರ್ ಮೊದಲಾದವರ ಜತೆ ಅವರು ಮಾತುಕತೆ ನಡೆಸಿ ಪ್ರತ್ಯೇಕ ಮತದಾತರ ಪಟ್ಟಿ ನವೀಕರಣ ಚಟುವಟಿಕೆಗಳ ಪ್ರಗತಿಯ ಅವಲೋಕನ ನಡೆಸುವರು.
ನಾಳೆ (ಡಿ.24ರಂದು) ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣೆ ವಿಭಾಗ ಸಿಬ್ಬಂದಿ ಮೊದಲಾದವರೊಂದಿಗೆ ಮಾತುಕತೆ ನಡೆಸುವರು. 2.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಂಸದ, ಶಾಸಕರ ಜೊತೆಗೆ, ಅಂಗೀಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆಗೆ ಸಂವಾದ ನಡೆಸುವರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕ್ಲಪ್ತ ಸಮಯಕ್ಕೆ ಹಾಜರಿರುವಂತೆ ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.