ಚಂದ್ರಾಪುರ: ಖ್ಯಾತ ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ ಮೊಮ್ಮಗಳು ಡಾ.ಶೀತಲ್ ಆಮ್ಟೆ ಕಾರಜಿಗಿ (39) ಅವರು ಕೌಟುಂಬಿಕ ಕಲಹದ ಕಾರಣಕ್ಕಾಗಿ ಮಹಾರಾಷ್ಟ್ರದ ವರೋರಾದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಶೀತಲ್ ವಿಷದ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎನ್ನುವ ಬಗ್ಗೆ ವಿವರಣೆ ನೀಡಲು ಪೊಲೀಸರು ನಿರಾಕರಿಸಿದ್ದು, ಶೀತಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಂದ್ರಾಪುರಕ್ಕೆ ಕಳುಹಿಸಲಾಗಿದೆ.
ಶೀತಲ್ ಮೃತದೇಹ ಪತ್ತೆಯಾದ ಆನಂದ್‌ವನ್‌ದ ಕೋಣೆಗೆ ಮೊಹರು ಹಾಕಲಾಗಿದ್ದು, ನಾಗಪುರದ ವಿಧಿವಿಜ್ಞಾನ ತಜ್ಞರ ತಂಡವು ವರೋರಾಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಬಾಬಾ ಆಮ್ಟೆ ಅವರು ವರೋರಾದಲ್ಲಿ ಸ್ಥಾಪಿಸಿರುವ ಮಹಾರೋಗಿ ಸೇವಾ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಶೀತಲ್, ಸಮಿತಿಯ ನಿರ್ವಹಣೆ ಕುರಿತು ಟ್ರಸ್ಟ್‌ನ ಸದಸ್ಯರು ಮತ್ತು ಆಮ್ಟೆ ಕುಟುಂಬದವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರು.
ಬಾಬಾ ಆಮ್ಟೆ ಅವರ ಪುತ್ರರಾದ ವಿಕಾಸ್, ಪ್ರಕಾಶ್ ಹಾಗೂ ಅವರ ಪತ್ನಿಯರಾದ ಭಾರತಿ ಮತ್ತು ಮಂದಾಕಿನಿ, ಶೀತಲ್ ಮಾಡಿದ್ದ ಆರೋಪಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿದ್ದರು.
'ವರೋರಾದ ಮಹಾರೋಗಿ ಸೇವಾ ಸಮಿತಿ ದೇಶದ ಪ್ರಮಖ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ದುರ್ಬಲ ವರ್ಗದ ಪರವಾಗಿ ಕೆಲಸ ಮಾಡಲು ಈ ಸಂಸ್ಥೆ ನಿರ್ದೇಶನ ಹಾಗೂ ಸ್ಫೂರ್ತಿ ನೀಡುತ್ತದೆ. ಲಕ್ಷಾಂತರ ಸಾಮಾಜಿಕ ಕಾರ್ಯಕರ್ತರು ಇಲ್ಲಿ ತರಬೇತಿ ಪಡೆದಿದ್ದಾರೆ. ಅಮ್ಟೆ ಕುಟುಂಬದ ಮೂರು ತಲೆಮಾರು ಬದ್ಧತೆಯಿಂದ ಇಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಂಸ್ಥೆಗೆ ಶೀತಲ್ ವಿಕಾಸ್ ಆಮ್ಟೆ ಅವರ ಕೊಡುಗೆ ಅಪಾರ. ಆದರೆ, ಅವರು ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಖಿನ್ನತೆಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಶೀತಲ್, ಸಮಿತಿ ಹಾಗೂ ಸಮಿತಿಯ ಟ್ರಸ್ಟ್ ಹಾಗೂ ಕೆಲಸಗಾರರ ಕುರಿತು ಸೂಕ್ತವಲ್ಲದ ಹೇಳಿಕೆಗಳನ್ನು ಹಾಕಿದ್ದಾರೆ. ಈ ಎಲ್ಲಾ ಆರೋಪಗಳು ನಿರಾಧಾರವಾದವು. ಶೀತಲ್ ಮಾಡಿರುವ ಆರೋಪಗಳ ತಪ್ಪುಗ್ರಹಿಕೆಯನ್ನು ತಡೆಯಲು, ಆಮ್ಟೆ ಕುಟಂಬವು ಪರಸ್ಪರ ಚರ್ಚಿಸಿಯೇ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದೆ' ಎಂದು ಆಮ್ಟೆ ಕುಟುಂಬ ತಿಳಿಸಿತ್ತು.
ಸಾಮಾಜಿಕ ಕಾರ್ಯಗಳು ವಿಶೇಷವಾಗಿ ಸಮಾಜದಿಂದ ತಿರಸ್ಕೃತರಾಗಿದ್ದ ಕುಷ್ಠರೋಗಿಗಳ ಸೇವೆ ಮಾಡಿದ ಕಾರಣಕ್ಕಾಗಿ ಬಾಬಾ ಆಮ್ಟೆ ಅವರಿಗೆ ರಾಮನ್ ಮ್ಯಾಗ್ಸೆಸ್ಸೆ ಹಾಗೂ ಪದ್ಮವಿಭೂಷಣ ಪ್ರಶಸ್ತಿ ದೊರೆಕಿವೆ. 2008ರಲ್ಲಿ ಬಾಬಾ ಆಮ್ಟೆ ನಿಧನ ಹೊಂದಿದರು.
1959ರಲ್ಲಿ ಚಂದ್ರಾಪುರ ಜಿಲ್ಲೆಯ ವರೋರಾದ ಆನಂದ್‌ವನ್‌ದಲ್ಲಿ ಬಾಬಾ ಆಮ್ಟೆ, ಮಹಾರೋಗಿ ಸೇವಾ ಸಮಿತಿಯನ್ನು ಸ್ಥಾಪಿಸಿದರು. ಸಮಿತಿಯ ಸಾರ್ವಜನಿಕ ದತ್ತಿ ಟ್ರಸ್ಟ್‌ಗೆ ಬಾಬಾ ಆಮ್ಟೆ ಅವರ ಮಗ ವಿಕಾಸ್ ಆಮ್ಟೆ ಕಾರ್ಯದರ್ಶಿಯಾಗಿ ಹಾಗೂ ಮೊಮ್ಮಗಳು ಶೀತಲ್ ಕಾರಜಿಗಿ ಅವರು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಮಹಾರೋಗಿ ಸೇವಾ ಸಮಿತಿಯು 1967ರಲ್ಲಿ ಚಂದ್ರಾಪುರ ಜಿಲ್ಲೆಯ ಸೋಮನಾಥ್‌ನಲ್ಲಿ ಲೋಕ್ ಬಿರಾದರಿ ಪ್ರಕಲ್ಪ್ ಹಾಗೂ 1973ರಲ್ಲಿ ಗಡ್‌ಚಿರೋಲಿ ಜಿಲ್ಲೆಯ ಭಮರ್‌ಗಡ ತೆಹಲ್ಸಿನಲ್ಲಿ ಹೇಮಲಾಕ್ಷ ಎನ್ನುವ ಯೋಜನೆ ಕೈಗೊಂಡಿದೆ. ಹೇಮಲಾಕ್ಷ ಯೋಜನೆಯನ್ನು ಡಾ.ಪ್ರಕಾಶ್- ಡಾ.ಮಂದಾಕಿನಿ ಆಮ್ಟೆ ಹಾಗೂ ಅವರ ಮಕ್ಕಳಾದ ದಿಗಂತ್, ಅನಿಕೇತ್ ಮತ್ತು ಅವರ ಪತ್ನಿಯರಾದ ಅನಘಾ ಮತ್ತು ಸಮೀಕ್ಷಾ ನೋಡಿಕೊಳ್ಳುತ್ತಿದ್ದಾರೆ.