ನವದೆಹಲಿ: ದೆಹಲಿಯಲ್ಲಿ ಕೆಲವು ಜನ 'ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಇಚ್ಛಿಸುತ್ತಿದ್ದಾರೆ', ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ, ಪ್ರಧಾನಿ ವಿರುದ್ಧ ಯಾರೇ ಎದ್ದು ನಿಂತರೂ ಅವರಿಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಮೋಹನ್ ಭಾಗವತ್ ವಿರುದ್ಧ ನಿಂತರೂ ಹೀಗೆ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಕ್ಕೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.
"ದೆಹಲಿಯಲ್ಲಿ ಯಾವಾಗಲೂ ನನ್ನನ್ನು ಕೆಣಕುವ ಮತ್ತು ಅವಮಾನಿಸುವ ಜನರಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಬಯಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆಗಳ ಫಲಿತಾಂಶವನ್ನು ಅವರಿಗೆ ಪ್ರಜಾಪ್ರಭುತ್ವದ ಉದಾಹರಣೆಯಾಗಿ ತೋರಿಸಬೇಕೆಂದು ನಾನು ಬಯಸುತ್ತೇನೆ" ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಜನರಿಗೆ ಆರೋಗ್ಯ ವಿಮೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
"ಕೆಲವು ರಾಜಕೀಯ ಶಕ್ತಿಗಳು ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡುತ್ತಲೇ ಇರುತ್ತವೆ ಆದರೆ, ಅವರ ದ್ವಂದ್ವತೆ ಮತ್ತು ಪವಿತ್ರತೆಯನ್ನು ನೋಡಿ ಎಂದು ಕುಟುಕಿದ್ದಾರೆ. ಪುದುಚೇರಿಯಲ್ಲಿ ಆಡಳಿತ ನಡೆಸುವ ಪಕ್ಷವು ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಿಲ್ಲ, ಆದರೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ವರ್ಷದೊಳಗೆ ಪಂಚಾಯತ್ ಮಟ್ಟದ ಚುನಾವಣೆಗಳನ್ನು ನಡೆಸಲಾಯಿತು, " ಎಂದು ಹೇಳಿದ್ದಾರೆ.
ಇತ್ತೀಚಿನ, ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಗಳು ಪ್ರಜಾಪ್ರಭುತ್ವದ ಬೇರನ್ನು ಬಲಪಡಿಸಿವೆ. 8 ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾಶ್ಮೀರದ ಜನತೆಗೆ ಮೋದಿ ಅಭಿನಂದನೆ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಆರ್ಥಿಕ ಅಪಾಯದ ರಕ್ಷಣೆಯನ್ನು ಒದಗಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿ-ಸಮುದಾಯಗಳಿಗೆ ಗುಣಮಟ್ಟದ ಮತ್ತು ಕೈಗೆಟುಕುವ ಅಗತ್ಯ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.