ಭರೂಚ: ಬುಡಕಟ್ಟು ಸಮುದಾಯದ ನಾಯಕ ಗುಜರಾತ್‌ನ ಬಿಜೆಪಿ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಮನ್‌ಸುಖ್ ವಾಸವ ಅವರು ಮಂಗಳವಾರ ಪಕ್ಷ ತೊರೆದಿದ್ದು, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಂಸದನ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಭರೂಚ ಕ್ಷೇತ್ರದಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಸಂಸದ ವಾಸವ ಅವರು ತಮ್ಮ ರಾಜೀನಾಮೆ ಕುರಿತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್‌ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ,'ನನ್ನ ತಪ್ಪಿನಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ, ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಂಸದನ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮೌಲ್ಯಾಧಾರಿತವಾಗಿ ಜೀವಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮನುಷ್ಯ ಎಂದ ಮೇಲೆ ತಪ್ಪುಗಳಾಗುವುದು ಸಹಜ. ನನ್ನ ತಪ್ಪುಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ವಕ್ತಾರ ಭರತ್ ಪಾಂಡ್ಯ, 'ಸಾಮಾಜಿಕ ಜಾಲತಾಣಗಳ ಮೂಲಕ ವಾಸವ ಅವರ ರಾಜೀನಾಮೆ ಪತ್ರ ತಲುಪಿದೆ' ಎಂದು ಹೇಳಿದ್ದಾರೆ.
'ಪಾಟೀಲ್, ವಾಸವ ಅವರೊಂದಿಗೆ ಈ ವಿಷಯ ಕುರಿತು ಮಾತನಾಡಿದ್ದಾರೆ. ಎಂಥದ್ದೇ ಸಮಸ್ಯೆ ಇದ್ದರೂ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ವಾಸವ ಗುಜರಾತ್‌ನ ಹಿರಿಯ ಸಂಸದರಾಗಿದ್ದು, ಅವರ ಎಲ್ಲಾ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ' ಎಂದು ಪಾಂಡ್ಯ ಹೇಳಿದರು.
ಕಳೆದ ವಾರ, ನರ್ಮದಾ ಜಿಲ್ಲೆಯ 121 ಹಳ್ಳಿಗಳನ್ನು 'ಪರಿಸರ ಸೂಕ್ಷ್ಮ ವಲಯ' ಎಂದು ಘೋಷಿಸುವ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಿ ವಾಸವ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು.