ಬದಿಯಡ್ಕ: ರಸ್ತೆಯ ಬದಿಯಲ್ಲಿ ಬೃಹತ್ ಗುಹೆಯೊಂದು ಕಂಡುಬಂದಿದ್ದು ಕುತೂಹಲ ಹಾಗೂ ಆತಂಕ ಸೃಷ್ಟಿಸಿದೆ.
ಬದಿಯಡ್ಕ-ಕುಂಬಳೆ ರಸ್ತೆಯ ಪೆರಡಾಲದಲ್ಲಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸುತ್ತಿದ್ದಾಗ ಈ ಗುಹೆ ಕಂಡುಬಂದಿದೆ. ಎರಡು ದಿನಗಳ ಹಿಂದೆ ಕೆಲಸಗಾರರು ರಸ್ತೆಯ ಬದಿಯ ಕಾಡುಗಳನ್ನು ಕಡಿದು ತೆಗೆದು, ಬುಧವಾರದಂದು ಜೆಸಿಬಿ ಯಂತ್ರದ ಮೂಲಕ ಅಗೆಯುತ್ತಿದ್ದಾಗ ಬೃಹತ್ ಗುಹೆ ಕಾಣಸಿಕ್ಕಿದೆ. ಮೇಲ್ಭಾಗವು ಸುಮಾರು ಎರಡು ಮೀಟರ್ ಅಗಲದಷ್ಟಿರುವ ಗುಹೆಯ ಅಡಿಭಾಗ ವಿಶಾಲವಾಗಿದೆ. ಅಡಿಭಾಗವು ಕಣ್ಣಿಗೆ ಗೋಚರವಾಗದಿದ್ದರೂ, ಸುಮಾರು 10 ಮೀಟರ್‍ಗಳಷ್ಟು ಅಗಲವಾಗಿದ್ದು ರಸ್ತೆಯ ಅಡಿಭಾಗಕ್ಕೂ ವಿಸ್ತರಿಸಿದೆ. ರಸ್ತೆಯು ಅಪಾಯದ ಭೀತಿಯಲ್ಲಿದೆಯೆಂದು ತಿಳಿದುಬಂದಿದ್ದು, ಗುಹೆಯ ಮೇಲಿನ ರಸ್ತೆಯ ಭಾಗದಲ್ಲಿ ಅಧಿಕಾರಿಗಳು ತಡೆ ಸೃಷ್ಟಿಸಿದ್ದಾರೆ.
ಗುಹೆಯ ಕುರಿತು ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಗುಹೆಯು ವ್ಯಾಪಕ ಪ್ರಚಾರವನ್ನು ಪಡೆದಿದ್ದು, ರಸ್ತೆಯ ವಾಹನ ಚಾಲಕರು ಕುತೂಹಲದಿಂದ ವೀಕ್ಷಿಸುವಂತಾಗಿದೆ. ಪ್ರಸ್ತುತ ವಾಹನ ಸಂಚಾರವು ಸುಗಮವಾಗಿ ಸಾಗುತ್ತಿದ್ದು, ಗುಹೆಯ ಮೇಲ್ಭಾಗವು ಜರಿದು ಬೃಹತ್ ಹೊಂಡ ಸೃಷ್ಟಿಯಾದಲ್ಲಿ ವಾಹನ ಸಂಚಾರಕ್ಕೂ ಅಡಚಣೆಯುಂಟಾಗಲಿದೆ ಎಂದು ಹೇಳಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಇಂತಹುದೇ ಗುಹೆಯೊಂದು ನೀರ್ಚಾಲು ಕುಂಟಿಕಾನ ಸಮೀಪ ಬಾವಿಯೊಂದರಲ್ಲಿ ಕಂಡುಬಂದಿದೆ.