ನವದೆಹಲಿ: ಕೋವಿಡ್-19 ಲಸಿಕೆಗೆ ಕೇಂದ್ರ ಸರ್ಕಾರದ ಯೋಜನೆಗಳು ಸಿದ್ಧವಾಗಿದೆ. ಈಗಾಗಲೇ ಕೇಂದ್ರ ಸರ್ಕಾರವೇ ಹೇಳುವಂತೆ ಕೊಮೊರ್ಬಿಡಿಟಿ (ವಿವಿಧ ಆರೋಗ್ಯ ಸಮಸ್ಯೆಗಳು) ಹೊಂದಿರುವವರು 50 ಹೆಚ್ಚಿನ ವಯಸ್ಸಿನವರಿಗೆ, ಕೊರೋನಾ ಹೆಲ್ತ್ ವಾರಿಯರ್ಸ್ ಗೆ ಆದ್ಯತೆಯ ಆಧಾರದಲ್ಲಿ ಲಸಿಕೆಗಳು ಲಭ್ಯವಾಗುತ್ತದೆ. ಆದರೆ ಈಗ ಲಸಿಕೆ ಬರುವುದಕ್ಕೂ ಮುನ್ನವೇ ಈಗ ಹೊಸದೊಂದು ತಲೆ ಬಿಸಿ ಪ್ರಾರಂಭವಾಗಿದೆ. ಅದೇನೆಂದರೆ ಈಗಾಗಲೇ ಕೆಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಯುವಜನತೆಯ ಕುರಿತ ಡೇಟಾಬೇಸ್ ಸರ್ಕಾರದ ಬಳಿ ಇಲ್ಲ!
ಮೊದಲ ಹಂತದಲ್ಲಿ ಆರೋಗ್ಯ ರಕ್ಷಾ ಹಾಗೂ ಮುನ್ನೆಲೆಯಲ್ಲಿರುವ ಕೊರೋನಾ ವಾರಿಯರ್ಸ್, ವೃದ್ಧರಿಗೆ, ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಮೊದಲ ಹಂತದಲ್ಲಿ ಕೋವಿಡ್-19 ಲಸಿಕೆಯನ್ನು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸರ್ಕಾರದ ಬಳಿ ಸೆನ್ಸಸ್ ಆಫ್ ಇಂಡಿಯಾದ ವರದಿ ಆಧಾರದಲ್ಲಿ ಹಿರಿಯ ನಾಗರಿಕರ ಡೇಟಾ ಬೇಸ್ ಮಾತ್ರ ಲಭ್ಯವಿದ್ದು, ಕೊಮೊರ್ಬಿಡಿಟಿ ಎದುರಿಸುತ್ತಿರುವ ಯುವಜನತೆಯ ಡೇಟಾ ಬೇಸ್ ಇಲ್ಲ ಎಂದು ಹೇಳಿದೆ.
"ಮೂರನೇ ಆದ್ಯತೆಯ ಗುಂಪಿನಲ್ಲಿ ಹೈಪರ್ ಟೆನ್ಷನ್, ಮಧುಮೇಹ, ಕ್ಯಾನ್ಸರ್, ಶ್ವಾಸಕೋಶ ಮತ್ತು ಮೂತ್ರಪಿಂಡ ಕಾಯಿಲೆ ಎದುರಿಸುತ್ತಿರುವವರು 50 ಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಎಂಬ ಲೆಕ್ಕಾಚಾರ ಹೊಂದಿದ್ದೇವೆ, ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳದೇ ಖಾಸಗಿ ಕ್ಷೇತ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿಯನ್ನು ಕಲೆಹಾಕುವುದಕ್ಕಾಗಿ ಮನೆಮನೆಗಳ ಸಮೀಕ್ಷೆ ನಡೆಸಿ ವಿವರ ಸಂಗ್ರಹಿಸುವುದಕ್ಕೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.