ನವದೆಹಲಿ: 'ಸ್ವ ಇಚ್ಛೆಯಿಂದ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಿ' ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯ, 'ಭಾರತದಲ್ಲಿ ಪರಿಚಯಿಸಲಾಗುತ್ತಿರುವ ಲಸಿಕೆ, ಬೇರೆ ದೇಶಗಳಲ್ಲಿ ಅಭಿವೃದ್ಧಿಪಡಿಸಿರುವ ಲಸಿಕೆಗಳಿಗಿಂತ ಪರಿಣಾಮಕಾರಿಯಾಗಿದೆ' ಎಂಬುದನ್ನು ಒತ್ತಿ ಹೇಳಿದೆ.
ರೋಗದ ವಿರುದ್ಧ ಬಲವಾದ ರೋಗನಿರೋಧಕ ಪ್ರತಿಕ್ರಿಯೆ ಅಭಿವೃದ್ಧಿಗೊಳ್ಳಲು ಸಹಾಯ ಮಾಡುವ ಕಾರಣದಿಂದಾಗಿ, ಮಾರ್ಗಸೂಚಿ ಅನ್ವಯ ಅವಧಿಗೆ ತಕ್ಕಂತೆ ನಿಗದಿತ ಅಳತೆಯಲ್ಲಿ ಎಲ್ಲರೂ ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಲಸಿಕೆಯ ಎರಡನೇ ಡೋಸ್ ಪಡೆದ ಎರಡು ವಾರಗಳ ನಂತರ ಸಾಮಾನ್ಯವಾಗಿ ದೇಹದಲ್ಲಿ ಪ್ರತಿಕಾಯಗಳು ರಕ್ಷಣಾತ್ಮಕ ಮಟ್ಟದಲ್ಲಿ ಬೆಳವಣಿಗೆಯಾಗುತ್ತವೆ. ಹೀಗಾಗಿ ಮಾರ್ಗಸೂಚಿಯ ನಿಯಮಗಳನ್ನು ಪಾಲಿಸುವುದು ಸೂಕ್ತ ಎಂದು ಅದು ತಿಳಿಸಿದೆ.
'ಕೋವಿಡ್ 19' ಲಸಿಕೆ ಕುರಿತು ಪದೇ ಪದೇ ಕೇಳಲಾಗುತ್ತಿರುವ (ಎಫ್‌ಎಕ್ಯು ) ಲಸಿಕೆ ಪಡೆಯುವುದು ಕಡ್ಡಾಯವೇ, ಪ್ರತಿಕಾಯಗಳು ಅಭಿವೃದ್ದಿಯಾಗಲು ಎಷ್ಟು ಸಮಯ ಬೇಕಾಗುತ್ತದೆ, ಕೊರೊನಾ ಸೋಂಕಿನಿಂದ ಗುಣಮುಖರಾದವರೂ ಈ ಲಸಿಕೆಯನ್ನು ತೆಗೆದುಕೊಳ್ಳಬೇಕೇ.. ಇಂಥ ಹಲವು ಪ್ರಶ್ನೆಗಳನ್ನು ಪಟ್ಟಿ ಮಾಡಿರುವ ಸಚಿವಾಲಯ, ಈ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸುತ್ತಿದೆ.
'ಕೋವಿಡ್ 19' ಲಸಿಕೆಯನ್ನು ಸ್ವಯಂ ಪ್ರೇರಿತರಾಗಿ ತೆಗೆದುಕೊಳ್ಳಬೇಕು. ಸಮುದಾಯದ ಆರೋಗ್ಯದ ದೃಷ್ಟಿಯಿಂದ ಹಾಗೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಲಸಿಕೆಯ ಪೂರ್ಣ ವೇಳಾಪಟ್ಟಿ (ಅವಧಿ ಮತ್ತು ಡೋಸೇಜ್) ಯಂತೆ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು' ಎಂದು ತಿಳಿಸಿದೆ.
ಲಸಿಕೆ ಪ್ರಯೋಗಗಳು ಅಂತಿಮ ಹಂತಗಳಲ್ಲಿವೆ. ಶೀಘ್ರದಲ್ಲೇ ಲಸಿಕೆ ನೀಡಲು ಸರ್ಕಾರ ಸಜ್ಜಾಗಿದೆ ಎಂದು ಅದು ಹೇಳಿದೆ.