ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ನೊವೆಲ್ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಕೊವಿಡ್ 19 ಪಾಸಿಟಿವ್ ವರದಿ ಬಂದಿರುವುದಾಗಿ ನಡ್ಡಾ ಅವರು ಭಾನುವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ಕೋವಿಡ್ 19 ಮೂಲ ರೋಗಲಕ್ಷಣಗಳು ಕಂಡು ಬಂದಿಲ್ಲ. ಆದರೆ, ಕೊವಿಡ್ 19 ನಿಯಮಾವಳಿ ಪ್ರಕಾರ ಪರೀಕ್ಷೆಗಳಿಗೆ ಒಳಗಾಗಿದ್ದೆ. ವರದಿಯಲ್ಲಿ ಕೊವಿಡ್ 19 ಪಾಸಿಟಿವ್ ಎಂದು ಬಂದಿದೆ. ಆದರೆ, ನನ್ನ ಆರೋಗ್ಯ ಚೆನ್ನಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಾಗ ಮತ್ತು ವೈದ್ಯರ ಸಲಹೆಯಂತೆ ಮನೆಯಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕ ಬಂದವರು ಕೂಡಾ ಪರೀಕ್ಷೆಗೆ ಒಳಗಾಗಿ ಸದ್ಯಕ್ಕೆ ಪ್ರತ್ಯೇಕವಾಗಿ ವಾಸಮಾಡಿ''ಎಂದು ನಡ್ಡಾ ಭಾನುವಾರ ಸಂಜೆ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸೋಂಕಿಗೆ ಸಿಲುಕಿರುವ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಲವಾರು ಬಿಜೆಪಿ ಮುಖಂಡರು ಹಾರೈಸಿದ್ದಾರೆ. ಪಶ್ಚಿಮ ಬಂಗಾಳ ಪ್ರವಾಸ ನಿರತರಾಗಿದ್ದ ನಡ್ಡಾ ಅವರಿಗೆ ಸೋಂಕು ತಗುಲಿದೆ ಎಂದು ಈ ಹಿಂದೆ ಕೂಡಾ ವರದಿ ಬಂದಿತ್ತು. ಆದರೆ, ಪಾಸಿಟಿವ್ ಎಂದು ದೃಢಪಟ್ಟಿರಲಿಲ್ಲ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಬಂಗಾಳದಲ್ಲಿ ತನ್ನ ಛಾಪು ಮೂಡಿಸಲು ಬಿಜೆಪಿ ಶ್ರಮಿಸುತ್ತಿದೆ.
ನಡ್ಡಾ ಅವರು ಬಂಗಾಳ ಭೇಟಿಯ ಸಮಯದಲ್ಲಿ ಅವರ ಬೆಂಗಾವಲು ಕಲ್ಲು ತೂರಾಟ ನಡೆದಿತ್ತು. ಕೇಂದ್ರ ಸರ್ಕಾರ ಮತ್ತು ಬಂಗಾಳ ಸರ್ಕಾರದ ನಡುವೆ ಘರ್ಷಣೆ ತೀವ್ರಗೊಂಡಿದ್ದು, ಬಿಜೆಪಿ ಹಿರಿಯ ಮುಖಂಡರು ನಿರಂತರ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.