ಕಾಸರಗೋಡು: ಕೆ.ಎಸ್.ಆರ್.ಟಿ.ಸಿ. ಬಸ್ ಸಹಿತ ಸಾರ್ವಜನಿಕ ಸಂಚಾರ ವ್ಯವಸ್ಥೆಗಳಲ್ಲಿ ಮಾಸ್ಕ್ ಧರಿಸದೇ ಪ್ರಯಾಣ ನಡೆಸಕೂಡದು. ಮಾಸ್ಕ್ ಧರಿಸದೇ ಸಂಚಾರ ನಡೆಸುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಅಂಥಾ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವೀಡಿಯೋ ಕಾನ್ ಫೆರೆನ್ಸ್ ಮೂಲಕ ಗುರುವಾರ ಜರುಗಿದ ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಕೋವಿಡ್ ಸಂಹಿತೆ ಉಲ್ಲಂಘಿಸಿದರೆ, ಸರಕಾರ ನಿಗದಿ ಪಡಿಸಿರುವ ನವೀಕರಿಸಿದ ದಂಡ ಹೇರಲು ಸಭೆ ನಿಋದರಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ, ವಾಹನ ಯಾತ್ರೆಗಳಲ್ಲಿ ವ್ಯಾಪಕವಾಗಿ ಸಂಹಿತೆಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ದೂರುಗಳು ಲಭಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.
ರಾತ್ರಿ 9 ರ ನಂತರ ಹೋಟೆಲ್ ಸಹಿತ ಅಂಗಡಿಗಳು ತೆರೆದಿರಬಾರದು:
ಕಾಸರಗೋಡು ಜಿಲ್ಲೆಯಲ್ಲಿ ರಾತ್ರಿ 9 ರ ನಂತರ ಹೋಟೆಲ್ ಸಹಿತ ಅಂಗಡಿಗಳು ತೆರೆದಿರಕೂಡದು. ತಳ್ಳುಗಾಡಿಗಳು ಸಂಜೆ 6 ರ ನಂತರ ಚಟುವಟಿಕೆ ನಡೆಸಕೂಡದು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿಗಳ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲು ಕಾಸರಗೋಡು, ಕಾಞಂಗಾಡ್ ಡಿ.ವೈ.ಎಸ್.ಪಿ.ಗಳಿಗೆ ಸಭೆ ಆದೇಶ ನೀಡಿದೆ. ಈ ಕಡೆಗಳಲ್ಲಿ ಕೋವಿಡ್ ಸಂಹಿತೆ ಉಲ್ಲಂಘನೆ ನಡೆಯುತ್ತಿಲ್ಲ ಎಂಬ ಖಚಿತತೆ ನಡೆಸುವ ನಿಟ್ಟಿನಲ್ಲಿ ಇನ್ಸಿಡೆಂಟ್ ಕಮಾಂಡರ್ ಗಳಾಗಿರುವ ತಹಸೀಲ್ದಾರರು ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮಾಸ್ಟರ್ ಯೋಜನೆಯ ಶಿಕ್ಷಕರು ಕೂಡ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವರು.
ವಿವಾಹ ಸಹಿತ ಸಮಾರಂಭಗಳಿಗೆ ಮುಂಗಡ ಅನುಮತಿ ಬೇಕು:
ವಿವಾಹ ಸಹಿತ ಸಮಾರಂಭಗಳನ್ನು, ಉತ್ಸವಗಳನ್ನು ನಡೆಸುವ ಮುನ್ನ ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಂದ ಮುಂಗಡ ಅನುಮತಿ ಪಡೆಯಬೇಕಿರುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿವಾಹ ಸಹಿತ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ ಭಾಗವಹಿಸಬಹುದು.
ಚುನಾವಣೆ ಪ್ರಚಾರ ವೇಳೆ ಕೋವಿಡ್ ಸಂಹಿತೆ ಖಚಿತಪಡಿಸಬೇಕು:
ಮನೆ ಮನೆ ಸಂದರ್ಶನ ನಡೆಸಿ ಚುನಾವಣೆ ಪ್ರಚಾರ ನಡೆಸುವ ವಏಳೆ, ಸಾರ್ವಜನಿಕ ಸಭೆಗಳನ್ನು ನಡೆಸುವ ವೇಳೆ ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಆದೇಶ ಉಲ್ಲಂಘಿಸುವ ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ವಿರುದ್ಧ ಕೇರಳ ಅಂಟುರೋಗ ಪ್ರತಿರೋಧ ನಿಯಂತ್ರಣ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ಸಿ.ಆರ್.ಪಿ.ಸಿ.144 ಕಾಯಿದೆ ಪ್ರಕಾರದ ನಿಷೇಧಾಜ್ಞೆ ಹಿಂತೆಗೆಯಲಾಗಿದ್ದರೂ, ಅಂತರ್ ರಾಜ್ಯ ಬಸ್ ಸೇವೆ ಪುನರಾರಂಭಿಸಿದ್ದರೂ, ಕೋವಿಡ್ ಸೋಂಕು ಹೆಚ್ಚಳ ಸಾಧ್ಯತೆಯ ಹಿನ್ನೆಲೆಯಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಭೆ ತಿಳಿಸಿದೆ.
ಆಹಾರ ಧಾನ್ಯಗಳ ಕಿಟ್ ಪಡೆದುಕೊಳ್ಳಬೇಕು:
ಅಕ್ಟೋಬರ್ ತಿಂಗಳ ಆಹಾರ ಧಾನ್ಯ ಕಿಟ್ ಇನ್ನೂ ಪಡೆದುಕೊಳ್ಳದೇ ಇಒರುವ ಪಡಿತರ ಚೀಟಿದಾರಿಗೆ ಡಿ.5 ವರೆಗೆ ಕಿಟ್ ವಿತರಣೆ ನಡೆಯಲಿದೆ. ನವೆಂಬರ್ ತಿಂಗಳ ಕಿಟ್ ಗಳು ಹಳದಿ(ಎ.ಎ.ವೈ.), ಪಿಂಕ್ (ಪಿ.ಎಚ್.ಎಚ್.), ಬಿಳಿ(ಎಲ್.ಪಿ.ಎನ್.ಎಸ್.) ಕಾರ್ಡ್ ದಾರರ ಕಿಟ್ ಗಳು ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಡಿಸೆಂಬರ್ ತಿಂಗಳ ಉಚಿತ ಕಿಟ್ ಪಡಿತರ ಅಂಗಡಿಗಳಿಗೆ ತಲಪಿದ ತಕ್ಷಣ ವಿತರಿಸಲಾಗುವುದು, ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ತಾಲೂಕು ಸಪ್ಲೈ ಅಧಿಕಾರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಜಿಲ್ಲಾ ವೈದ್ಯಧಿಕಾರಿ ಎ.ವಿ.ರಾಮದಾಸ್, ಜಿಲ್ಲಾ ಸಪ್ಲೈ ಅಧಿಕಾರಿ ವಿ.ಕೆ.ಶಶಿಧರನ್, ಕೊರೋನಾ ಕೋರ್ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.