ಪುಣೆ: ಶಿರಡಿಗೆ ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹಾಗೂ ಅವರ ನೇತೃತ್ವದ ಭೂಮಾತಾ ಬ್ರಿಗೇಡ್‌ನ ಹಲವು ಸದಸ್ಯರನ್ನು ಅಹ್ಮದ್‌ನಗರದಲ್ಲಿ ಪೊಲೀಸರು ಗುರುವಾರ ಬಂಧಿಸಿದರು.
ಶಿರಡಿಯ ಸಾಯಿಬಾಬಾ ಮಂದಿರದಲ್ಲಿ 'ಭಕ್ತರು ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಬೇಕು' ಎಂಬ ಒಕ್ಕಣೆ ಇರುವ ಫಲಕ ಅಳವಡಿಸಲಾಗಿದೆ. ಈ ಫಲಕವನ್ನು ತೆರವುಗೊಳಿಸುವ ಸಲುವಾಗಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ಭೂಮಾತಾ ಬ್ರಿಗೇಡ್ ಸದಸ್ಯರು ಶಿರಡಿಗೆ ತೆರಳುತ್ತಿದ್ದರು.
'ವಿವಾದಾತ್ಮಕ ಸಂದೇಶವನ್ನು ಹೊಂದಿರುವ ಫಲಕವನ್ನು ಕೂಡಲೇ ತೆಗೆದು ಹಾಕಬೇಕು. ತಪ್ಪಿದಲ್ಲಿ ಡಿ. 10ರಂದು ಸಂಘಟನೆಯ ಸದಸ್ಯರೊಂದಿಗೆ ತೆರಳಿ ಆ ಫಲಕವನ್ನು ತೆರವು ಮಾಡುವುದಾಗಿ' ದೇಸಾಯಿ ಈ ಮೊದಲು ಎಚ್ಚರಿಕೆ ನೀಡಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ದೇಸಾಯಿಗೆ ಮಂಗಳವಾರ ನೋಟಿಸ್ ನೀಡಿದ್ದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಗೋವಿಂದ ಶಿಂಧೆ, ಡಿ.8ರಿಂದ 11ರ ಮಧ್ಯರಾತ್ರಿ 11ರ ವರೆಗೆ ಅಹ್ಮದ್‌ನಗರ ಜಿಲ್ಲೆಯ ಶಿರಡಿ ಪಟ್ಟಣವನ್ನು ಪ್ರವೇಶಿಸಬಾರದು ಎಂದು ಅವರಿಗೆ ಸೂಚಿಸಿದ್ದರು.
ಫಲಕ ಅಳವಡಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಂದಿರ ಟ್ರಸ್ಟ್‌ನ ಹಿರಿಯ ಅಧಿಕಾರಿಯೊಬ್ಬರು, 'ನಾವು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಹೇರಿಲ್ಲ. ಈ ರೀತಿ ಫಲಕ ಹಾಕಿ, ಭಕ್ತರಿಗೆ ಮನವಿ ಮಾಡಿದ್ದೇವೆ ಅಷ್ಟೆ' ಎಂದು ಹೇಳಿದ್ದಾರೆ.