ನವದೆಹಲಿ:ಆಯುಷ್ ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದನ್ನು ವಿರೋಧಿಸಿರುವ ಭಾರತೀಯ ವೈದ್ಯಕೀಯ (ಐಎಂಎ) ಸಂಘ ಇಂದು (ಶುಕ್ರವಾರ ಡಿಸೆಂಬರ್ 11) ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಒಪಿಡಿ ಬಂದ್ ನಡೆಸುವ ಮೂಲಕ ಪ್ರತಿಭಟನೆ ನಡೆಸಲು ಕರೆ ನೀಡಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆಯ ತರಬೇತಿ ನೀಡಲು ಸರ್ಕಾರ ಹೊರಡಿಸಿರುವ ಅಧಿಸೂಚನೆಯ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸಲು ಶುಕ್ರವಾರ (ಡಿ.11) ಕರೆ ನೀಡಿರುವುದಾಗಿ ತಿಳಿಸಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಕಲಿಯಲು ಅವಕಾಶ ನೀಡುವುದನ್ನು "ಮಿಕ್ಸೋಪತಿ" ಎಂದು ಕರೆದಿರುವ ಐಎಂಎ,ಈ ಹಿಂದೆಯೇ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿಗೆ ಅವಕಾಶ ನೀಡಿದರೆ ಎಲ್ಲಾ ಅನಗತ್ಯ ಮತ್ತು ಕೋವಿಡ್ ಯೇತರ ಸೇವೆಗಳನ್ನು ಆಸ್ಪತ್ರೆಗಳಲ್ಲಿ ಸ್ಥಗಿತಗೊಳಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು.
ನವೆಂಬರ್ 20ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಸ್ನಾತಕೋತ್ತರ ಆಯುರ್ವೇದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 58 ಬಗೆಯ ಶಸ್ತ್ರಚಿಕಿತ್ಸೆ ನಡೆಸುವ ತರಬೇತಿಯನ್ನು ನೀಡಬೇಕು ಹಾಗೂ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ಮಾಡುವಂತಿರಬೇಕು ಎಂದು ತಿಳಿಸಿದೆ.
ಆಯುಷ್ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾದ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಐಎಂ) ಹೊರಡಿಸಿರುವ ಗಜೆಟ್ ನೋಟಿಫಿಕೇಶನ್ ಪ್ರಕಾರ,ಭಾರತೀಯ ಔಷಧ ಕೇಂದ್ರ ಮಂಡಳಿಗೆ ತಿದ್ದುಪಡಿ ಮಾಡುವ(ಸ್ನಾತಕೋತ್ತರ ಆಯುರ್ವೇದ ಶಿಕ್ಷಣ ನಿಯಮ 2016) ಮೂಲಕ ಕಣ್ಣು, ಕಿವಿ, ಮೂಗು ಮತ್ತು ಗಂಟಲು ಸೇರಿದಂತೆ 39 ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮತ್ತು 19 ಇತರ ವಿಧಾನಗಳನ್ನು ಪಟ್ಟಿ ಮಾಡಿತ್ತು ಎಂದು ವರದಿ ತಿಳಿಸಿದೆ.