ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ದಿನಗಳ ಹಿಂದೆ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಭೇಟಿ ನೀಡಿದ್ದರು. ಕೊರೊನಾ ಸೋಂಕಿಗೆ ಸಿದ್ಧಪಡಿಸುತ್ತಿರುವ ಲಸಿಕೆಯ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಿದ್ದರು.
ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಮಾಡುವ ಸೆರಂ ಇನ್‌ಸ್ಟಿಟ್ಯೂಟ್ ಶೀಘ್ರವೇ ಲಸಿಕೆಯ ಪೂರೈಕೆ ಕುರಿತು ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಒಂದು ಡೋಸ್ ಲಸಿಕೆಗೆ 250 ರೂ. ದರವನ್ನು ನಿಗದಿ ಮಾಡುವ ನಿರೀಕ್ಷೆ ಇದೆ.
ಸೆರಂ ಈಗಾಗಲೇ ಲಸಿಕೆಯ ತುರ್ತು ಉಪಯೋಗಕ್ಕೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಡೋಸ್ ಲಸಿಕೆಗೆ 1000 ರೂ. ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದರೆ ದರ ಕಡಿಮೆಯಾಗಲಿದೆ.
ಸೆರಂ ಭಾರತಕ್ಕೆ ಲಸಿಕೆಯನ್ನು ನೀಡಲು ಮೊದಲು ಗಮನ ಹರಿಸಲಿದೆ. ಬಳಿಕ ಬೇರೆ ದೇಶಗಳಿಗೆ ಲಸಿಕೆಯನ್ನು ನೀಡಲಿದೆ. ಭಾರತದಲ್ಲಿ ಇದುವರೆಗೂ 9.70 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ವಿಶ್ವದಲ್ಲಿ ಅಮೆರಿಕ ಬಿಟ್ಟರೆ ಭಾರತ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಅಮೆರಿಕ ಮೂಲದ ಕೋವಿಡ್ ಲಸಿಕೆ ತಯಾರಿಕಾ ಸಂಸ್ಥೆ ಫೀಜರ್ ಸಹ ಭಾರತ ಸರ್ಕಾರಕ್ಕೆ ಲಸಿಕೆ ತುರ್ತು ಉಪಯೋಗಕ್ಕೆ ಅನುಮತಿ ನೀಡುವಂತೆ ಮನವಿ ಸಲ್ಲಿಕೆ ಮಾಡಿದೆ.