ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಬ್ಲ್ಯುಬಿಪಿಸಿಸಿ) ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಗುರುವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
'ಎಡಪಕ್ಷಗಳ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಗುರುವಾರ ಸಮ್ಮತಿ ಸೂಚಿಸಿದೆ' ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
ಎಡಪಕ್ಷಗಳ ಜೊತೆಗಿನ ಮೈತ್ರಿ ಬಗ್ಗೆ ಒಲವು ತೋರಿದ್ದ ಡಬ್ಲ್ಯುಬಿಪಿಸಿಸಿ, ಈ ವಿಷಯವನ್ನು ಹೈಕಮಾಂಡ್ ಗಮನಕ್ಕೆ ತಂದಿತ್ತು. ಕಾಂಗ್ರೆಸ್ ಜೊತೆ ಕೈ ಜೋಡಿಸಲು ಎಡಪಕ್ಷಗಳೂ ಆಸಕ್ತಿ ತೋರಿದ್ದವು. ಹೀಗಾಗಿ ಮೈತ್ರಿಯ ಹಾದಿ ಸುಗಮವಾಗಿದೆ ಎಂದು ಹೇಳಲಾಗಿದೆ.
ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆ ವೇಳೆ ಎಡಪಕ್ಷ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿಯೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ವಿಧಾನಸಭಾ ಚುನಾವಣೆಯು 2021ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಿಗದಿಯಾಗಿದೆ.