ವಾಷಿಂಗ್ಟನ್ : ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯಲ್ಲಿ ಹದಗೆಟ್ಟಿರುವ ಚೀನಾ-ಅಮೆರಿಕ ಸಂಬಂಧದ ವಿಚಾರದಲ್ಲಿ ತಮ್ಮ ನಡೆಯನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್ ರೂಪಿಸಿದ್ದಾರೆ. ಮುಂದಿನ ನಾಲ್ಕು ವರ್ಷಗಳವರೆಗಿನ ಅಮೆರಿಕ-ಚೀನಾ ಬಾಂಧವ್ಯವನ್ನು ನಿರ್ಧರಿಸಿರುವ ನಿಟ್ಟಿನಲ್ಲಿ ಅವರು, ಬೀಜಿಂಗ್ ಅನ್ನು ಎದುರಿಸಲು ಸಮಾನಮನಸ್ಕ ದೇಶಗಳೊಂದಿಗೆ ಸಮ್ಮಿಶ್ರ ಕೂಟವನ್ನು ರಚಿಸಲು ಅಮೆರಿಕ ಮುಂದಾಗಬೇಕಿದೆ ಎಂದಿದ್ದಾರೆ.
'ಚೀನಾದೊಂದಿಗೆ ಸ್ಪರ್ಧಿಸಲು ನಾವು ತನ್ನ ವ್ಯಾಪಾರ ವಹಿವಾಟಿನ ನಿಯಮಗಳ ಉಲ್ಲಂಘನೆ, ತಂತ್ರಜ್ಞಾನ, ಮಾನವ ಹಕ್ಕುಗಳು ಮತ್ತು ಇತರೆ ವಿಚಾರಗಳಲ್ಲಿ ಚೀನಾ ಸರ್ಕಾರವನ್ನು ಹೊಣೆಗಾರನನ್ನಾಗಿಸಬೇಕು. ಸಮಾನ ಮನಸ್ಕ ಸಹಭಾಗಿಗಳು ಮತ್ತು ಮಿತ್ರರಾಷ್ಟ್ರಗಳೊಂದಿಗೆ ನಮ್ಮ ಹಿತಾಸಕ್ತಿಗಳು ಮತ್ತು ಮೌಲ್ಯಗಳ ಪಾಲುದಾರಿಕೆಯ ಸಾಮಾನ್ಯ ಉದ್ದೇಶದೊಂದಿಗೆ ನಾವು ಮೈತ್ರಿಕೂಟ ರಚಿಸಿಕೊಂಡರೆ ನಮ್ಮ ಸ್ಥಾನ ಪ್ರಬಲವಾಗಲಿದೆ' ಎಂದು ಬೈಡನ್ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಕ್ಸಿಂಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಹಾಂಕಾಂಗ್ ವಿಶೇಷ ಸ್ಥಾನಮಾನದ ಒತ್ತುವರಿ, ಬೀಜಿಂಗ್‌ನ ನ್ಯಾಯಸಮ್ಮತವಲ್ಲದ ವ್ಯಾಪಾರ ಅಭ್ಯಾಸಗಳು, ಕೊರೊನಾ ವೈರಸ್ ವಿಚಾರದಲ್ಲಿ ಪಾರದರ್ಶಕತೆ ಕೊರತೆ, ಜಗತ್ತಿನ ವಿವಿಧ ಭಾಗಗಳಲ್ಲಿ ಚೀನಾ ಸೇನೆಯ ಆಕ್ರಮಣ ಸೇರಿದಂತೆ ವಿವಿಧ ವಿಚಾರಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧಗಳು ಹಳಸಿದ್ದವು.
ಚೀನಾ ವಿರುದ್ಧ ಇತರೆ ಪ್ರಜಾಪ್ರಭುತ್ವ ದೇಶಗಳೊಂದಿಗಿನ ಪಾಲುದಾರಿಕೆಯು ಅಮೆರಿಕದ ಆರ್ಥಿಕತೆಯ ಸರಾಸರಿಯನ್ನು ದುಪ್ಪಟ್ಟಿಗೂ ಅಧಿಕಗೊಳಿಸಲಿದೆ. ನಾವು ಜಾಗತಿಕ ಆರ್ಥಿಕತೆಯಲ್ಲಿ ಶೇ 25ರಷ್ಟು ನಮ್ಮದೇ ಪಾಲು ಹೊಂದಿದ್ದೇವೆ. ಆದರೆ ನಮ್ಮ ಪ್ರಜಾಸತ್ತಾತ್ಮಕ ಪಾಲುದಾರರೊಂದಿಗೆ ನಾವು ನಮ್ಮ ಆರ್ಥಿಕತೆಯ ಮಟ್ಟವನ್ನು ಎರಡುಪಟ್ಟಿಗೂ ಹೆಚ್ಚು ವೃದ್ಧಿಸಬಹುದು ಎಂದು ಬೈಡನ್ ಹೇಳಿದ್ದಾರೆ.