ಪುಣೆ: 'ಸಾಂಪ್ರದಾಯಿಕ ಉಡುಗೆ ಧರಿಸಿ ದೇವಸ್ಥಾನಕ್ಕೆ ಬರಬೇಕೆಂಬ ನಿಯಮ ಕೇವಲ ಭಕ್ತರಿಗೆ ಏಕೆ ಅನ್ವಯವಾಗಬೇಕು, ಇದೇ ನಿಯಮ ಅರ್ಚಕರಿಗೆ, ಪೂಜಾರಿಗಳಿಗೇಕೆ ಅನ್ವಯವಾಗಬಾರದು' ಎಂದು ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಿರಡಿ ಸಾಯಿಬಾಬಾ ದೇವಾಲಯದ ಟ್ರಸ್ಟ್‌ನವರನ್ನು ಪ್ರಶ್ನಿಸಿದ್ದಾರೆ.
ದೇವರ ದರ್ಶನಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ವಸ್ತ್ರವನ್ನು ಧರಿಸಿರಬೇಕು ಎಂದು ಶಿರಿಡಿ ಸಾಯಿಬಾಬಾ ದೇವಾಲಯದ ಟ್ರಸ್ಟ್‌ನವರು ಭಕ್ತರಲ್ಲಿ ಮನವಿ ಮಾಡಿರುವುದಕ್ಕೆ ತೃಪ್ತಿ ದೇಸಾಯಿ 'ಭಕ್ತರು ಮತ್ತು ಅರ್ಚಕರಿಗೆ ಏಕೆ ಬೇರೆ ಬೇರೆ ನಿಯಮಗಳು' ಎಂದು ಪ್ರಶ್ನಿಸಿದ್ದಾರೆ.
ವಿಡಿಯೊ ಸಂದೇಶವೊಂದರಲ್ಲಿ ಟ್ರಸ್ಟ್‌ನ ಈ ನಡೆಯನ್ನು ಪ್ರಶ್ನಿಸಿರುವ ತೃಪ್ತಿ ದೇಸಾಯಿ, ಇದು ದೇವಾಲಯದ ಮಂಡಳಿಯವರು ಭಕ್ತರಿಗೆ ಮಾಡುತ್ತಿರುವ ಅವಮಾನ ಹಾಗೂ ಅವರಿಗೆ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ದೂರಿದ್ದಾರೆ. 'ಈ ನಿಯಮಗಳನ್ನು ತೆಗೆಯದಿದ್ದರೆ, ನಾನು ನನ್ನ ಇತರೆ ಹೋರಾಟಗಾರರೊಂದಿಗೆ ಶಿರಡಿಗೆ ಬಂದು, ಆ ಕೆಲಸ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.
ಶ್ರೀ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾನ್ಹುರಾಜ್ ಬಗಟೆ ಅವರು , 'ದೇವರ ದರ್ಶನಕ್ಕೆ ಬರುವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸುವಂತೆ ಭಕ್ತರಲ್ಲಿ ಮನವಿ ಮಾಡಿದ್ದೇವೆಯೇ ಹೊರತು ಯಾವುದೇ ವಸ್ತ್ರ ಸಂಹಿತೆಯನ್ನು ಹೇರಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ. 'ದೇವಾಲಯಕ್ಕೆ ಬರುವವರಲ್ಲಿ ಕೆಲವರು ಆಕ್ಷೇಪಾರ್ಹ ಉಡುಗೆ ಧರಿಸಿರುತ್ತಾರೆ' ಎಂಬ ಭಕ್ತರ ದೂರನ್ನು ಆಧರಿಸಿ ಭಕ್ತರಲ್ಲಿ ಈ ರೀತಿ ಮನವಿ ಮಾಡಿದೆವು' ಎಂದು ಸಿಇಒ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದರುವ ದೇಸಾಯಿ, 'ದೇವಾಲಯದಲ್ಲಿರುವ ಅರ್ಚಕರು ಅರೆ ಬೆತ್ತಲೆಯಲ್ಲಿರುತ್ತಾರೆ. ಯಾವ ಭಕ್ತರೂ ಇದಕ್ಕೆ ಆಕ್ಷೇಪ ಎತ್ತುವುದಿಲ್ಲ. ದೇವಾಲಯದ ಮಂಡಳಿ ಮೊದಲು ಇಂಥ ನಿಯಮಗಳನ್ನು ತೆಗೆದು ಹಾಕಬೇಕು' ಎಂದು ಒತ್ತಾಯಿಸಿದ್ದಾರೆ.