ಚಂಡೀಗಢ: ಮಾತುಕತೆಗೆ ಸೂಕ್ತ ಪ್ರಸ್ತಾವನೆ ಕಳುಹಿಸುವಂತೆ ರೈತ ಸಂಘಗಳು ಕೇಳಿದ ಮಾರನೇ ದಿನವೇ ಕೇಂದ್ರ ಸರ್ಕಾರ ತಾನು, ಎಲ್ಲಾ ಸಮಸ್ಯೆಗಳ ಕುರಿತು ಮುಕ್ತ ಮಾತುಕತೆಗೆ ಸಿದ್ಧವಿದ್ದು, ಅದಕ್ಕೆ ನೀವೇ ದಿನಾಂಕ ಮತ್ತು ಸಮಯ ನಿಗದಿಪಡಿಸುವಂತೆ ಗುರುವಾರ ಚೆಂಡನ್ನು ರೈತರ ಅಂಗಳಕ್ಕೆ ಎಸೆದಿದೆ.
ಈ ಸಂಬಂಧ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು 40 ರೈತ ಸಂಘಟನೆಗಳಿಗೆ ಪತ್ರ ಬರೆದಿದ್ದು, ನೀವು ಚರ್ಚಿಸಲು ಬಯಸುವ ಸಮಸ್ಯೆಗಳ ಬಗ್ಗೆ ವಿವರ ನೀಡುವಂತೆ ಕೇಳಿಕೊಂಡಿದ್ದಾರೆ.
ಸರ್ಕಾರ ಸ್ಪಷ್ಟ ಉದ್ದೇಶ ಮತ್ತು ಮುಕ್ತ ಮನಸ್ಸಿನಿಂದ ಪ್ರತಿಭಟನೆಯನ್ನು ಅಂತ್ಯಗೊಳಿಸಲು ನಿಮ್ಮೊಂದಿಗೆ ಮತ್ತೆ ಮಾತುಕತೆ ನಡೆಸಲು ಸಿದ್ಧವಿದೆ. ಮಾತುಕತೆಯ ದಿನಾಂಕ ಮತ್ತು ಸಮಯವನ್ನು ತಿಳಿಸುವಂತೆ ಅಗರ್ವಾಲ್ ಅವರು ರೈತ ಮುಖಂಡರಿಗೆ ಮನವಿ ಮಾಡಿದ್ದಾರೆ.
ಸರ್ಕಾರ ಪ್ರತಿಭಟನಾನಿರತ ರೈತ ಸಂಘಟನೆಗಳು ಎತ್ತಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.