ತಿರುವನಂತಪುರಂ : ನಿವಾರ್ ಬಳಿಕ ಮತ್ತೊಂದುಚಂಡಮಾರುತ ಬರುತ್ತಿದ್ದು ಇದು ಕೇರಳಕ್ಕೆ ಸಾಕಷ್ಟು ಅಪಾಯ ತಂದೊಡ್ಡಬಹುದು ಎಂದು ಅಂದಾಜಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಡಿಸೆಂಬರ್ 1 ರಂದು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ. ಹೀಗಾಗಿ ತೀವ್ರ ಕಟ್ಟೆಚ್ಚರವಹಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಯಾವುದೇ ಸಂದರ್ಭವನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಪರಿಹಾರ ಕೇಂದ್ರಗಳನ್ನು ತೆರೆಯಬೇಕು ಎಂದು ಸೂಚಿಸಿದರು. ಬುರೆವಿ ಚಂಡಮಾರುತ ಕೇರಳದ ಕರಾವಳಿಗೆ ಅಪ್ಪಳಿಸಲಿರುವ ಕಾರಣ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ 1 ರಿಂದ ಕೇರಳದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ 24 ಗಂಟೆಯಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಾಗಲಿದೆ.
ಈಗಾಗಲೇ ಒಂದು ವಾರದಿಂದಲೂ ದೇಶದ ಪೂರ್ವ ಕರಾವಳಿಯ ಜನರು 'ನಿವಾರ್' ಚಂಡಮಾರುತದಿಂದಾಗಿ ನಲುಗಿದ್ದಾರೆ. ಇದೀಗ ಮತ್ತೊಂದು ಚಂಡಮಾರುತ ರೂಪುಗೊಳ್ಳುತ್ತಿದ್ದು, ವಾರದೊಳಗೆ ಅಪ್ಪಳಿಸುವ ಭೀತಿ ಎದುರಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬರಲಿರುವ ಹೊಸ ಚಂಡಮಾರುತಲಕ್ಕೆ 'ಬುರೆವಿ' ಎಂದು ಹೆಸರಿಸಲಾಗಿದೆ. ನಿವಾರ್ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ಆಂಧ್ರದ ಕರಾವಳಿಗಳು ಹೆಚ್ಚು ಹಾನಿಗೆ ಒಳಗಾಗಿದ್ದವು. ಇದೀಗ ಬುರೆವಿ ಕೂಡ ಇದೇ ಭಾಗಕ್ಕೆ ಅಪ್ಪಳಿಸಲಿರುವ ಕಾರಣ ಆತಂಕ ಹೆಚ್ಚಿಸಿದೆ. ಈಗಾಗಲೇ ತಮಿಳುನಾಡಿನ ಕರಾವಳಿಯಲ್ಲಿ ಮತ್ತೆ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲೂ ಅಲರ್ಟ್ ಘೋಷಿಸಲಾಗಿದೆ.
ಹೊಸದಾಗಿ ರೂಪು ತಳೆಯುತ್ತಿರುವ ಚಂಡಮಾರುತ ಡಿಸೆಂಬರ್ 2ರ ವೇಳೆಗೆ ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲೂ ಅಲರ್ಟ್ ಘೋಷಿಸಲಾಗಿದೆ.