ನವದೆಹಲಿ: ದೆಹಲಿ ಮೆಟ್ರೊ ರೈಲಿನ ಮೆಜೆಂಟಾ ಮಾರ್ಗದಲ್ಲಿ ದೇಶದ ಮೊಟ್ಟ ಮೊದಲ ಚಾಲಕ ರಹಿತ, ಮೆಟ್ರೊ ರೈಲಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ ಸೇವೆಗೂ (ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್) ಪ್ರಧಾನಿಯವರು ಚಾಲನೆ ನೀಡಿದರು.
ಚಾಲಕರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರುತ್ತವೆ. ಇದು ಮಾನವ ದೋಷದ ಸಾಧ್ಯತೆಯನ್ನು ನಿವಾರಿಸುತ್ತದೆ ಎಂದು ಸರ್ಕಾರ ಹೇಳಿದೆ. ನವದೆಹಲಿಯ ಮೆಜೆಂಟಾ ಲೈನ್ (ಜನಕಪುರಿ- ಪಶ್ಚಿಮ ಬಟಾನಿಕಲ್ ಗಾರ್ಡನ್) ನಂತರ 2021ರ ಮಧ್ಯಭಾಗದ ಹೊತ್ತಿಗೆ ದೆಹಲಿಯ ಪಿಂಕ್ ಲೈನ್ (ಮಜ್ಲಿಸ್ ಪಾರ್ಕ್-ಶಿವವಿಹಾರ) ಮಾರ್ಗದಲ್ಲಿ ಚಾಲಕರಹಿತ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.
ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೌಲಭ್ಯ, ದೇಶದ ಯಾವುದೇ ಭಾಗದಲ್ಲಿ ವಿತರಿಸಲಾದ ರುಪೇ-ಡೆಬಿಟ್ ಕಾರ್ಡ್ ಬಳಸಿ ಬಳಸಿಕೊಂಡು ಮಾರ್ಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಸೌಲಭ್ಯವು 2022 ರ ವೇಳೆಗೆ ದೆಹಲಿಯ ಸಂಪೂರ್ಣ ಮೆಟ್ರೊ ಮಾರ್ಗದಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.