ಕೊಚ್ಚಿ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಪಾಲಕ್ಕಾಡ್ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಬಿಜೆಪಿ ಕಾರ್ಯಕರ್ತರು 'ಜೈ ಶ್ರೀರಾಮ್' ಫ್ಲಕ್ಸ್ ತೂಗು ಹಾಕಿದ ಘಟನೆಯನ್ನು ಕೇಂದ್ರ ಸಚಿವ ವಿ ಮುರಲೀಧರನ್ ಅವರು ಸಮರ್ಥಿಸಿಕೊಂಡಿರುವರು.
ಪಕ್ಷದ ಕಾರ್ಯಕರ್ತರು 'ಜೈ ಶ್ರೀರಾಮ್' ಪ್ಲೆಕ್ಸ್ ಹಾಕಿರುವುದು ದೊಡ್ಡ ಅಪರಾಧವೇನಲ್ಲ ಎಂದು ವಿ ಮುರಲೀಧರನ್ ಅವರು ಹೇಳಿಕೆ ನೀಡಿದ್ದಾರೆ. ಘಟನೆಯ ಬಗ್ಗೆ ಪೆÇಲೀಸರು ತನಿಖೆ ಆರಂಭಿಸಿರುವಂತೆ ಕೇಂದ್ರ ಸಚಿವರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶ್ರೀ ರಾಮನು ಜಾತಿ, ಧರ್ಮಗಳ ಹೊರತಾಗಿ ಜನರು ಸ್ವೀಕರಿಸುವ ಸಂಕೇತವಾಗಿದೆ ಎಂದು ಸಚಿವರು ಹೇಳಿದರು. ಜೈ ಶ್ರೀರಾಮ್ ಎಂದು ಕರೆಯುವುದು ಅಪರಾಧ ಎಂದು ದೇಶದಲ್ಲಿ ಯಾರೂ ಹೇಳಿಲ್ಲ ಎಂದು ವಿ ಮುರಲೀಧರನ್ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಯ ಚುನಾವಣಾ ಫಲಿತಾಂಶದ ದಿನದಂದು ಪಾಲಕ್ಕಾಡ್ ಮಹಾನಗರ ಪಾಲಿಕೆ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ ಗೆಲುವು ಸಾಧಿಸಿದ ನಂತರ, ಬಿಜೆಪಿ ಕಾರ್ಯಕರ್ತರು ಕಟ್ಟಡದ ಮೇಲ್ಭಾಗಕ್ಕೆ ತೆರಳಿ ಶಿವಾಜಿಯ ಚಿತ್ರದೊಂದಿಗೆ ಫ್ಲಕ್ಸ್ ಅನ್ನು ನೇತುಹಾಕಿ ಅದರ ಮೇಲೆ ಜೈ ಶ್ರೀರಾಮ್ ಬರೆದಿದ್ದಾರೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಫ್ಲಕ್ಸ್‍ಗಳನ್ನು ಸಹ ಕಟ್ಟಡದ ಒಂದು ಬದಿಯಲ್ಲಿ ನೇತುಹಾಕಲಾಗಿತ್ತು. ಆದರ ವಿಡಿಯೋ ವೈರಲ್ ಆಗಿದ್ದು ಆ ಬಳಿಕ ನಗರಸಭೆ ಕಾರ್ಯದರ್ಶಿ ಮತ್ತು ಸಿಪಿಎಂ ಮತ್ತು ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಪೋಲೀಸರಿಗೆ ದೂರು ನೀಡಿದ್ದರು. ನಗರಸಭೆ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ ಜೈ ಜೈರಾಮ್ ಫ್ಲಕ್ಸ್ ತೂಗು ಹಾಕಿದ ಪ್ರಕರಣದಲ್ಲಿ ಪೋಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಆರೋಪಿಗಳು ಬಿಜೆಪಿ ಕೌನ್ಸಿಲರ್‍ಗಳು ಮತ್ತು ಮತಗಟ್ಟೆ ಏಜೆಂಟರು. ಘಟನೆಯಲ್ಲಿ ಅಪರಾಧಿಗಳನ್ನು ಗುರುತಿಸಲಾಗಿದ್ದರೂ, ಪೋಲೀಸರು ಸಾಕ್ಷ್ಯಗಳನ್ನು ಗುರುತಿಸಿದ ಬಳಿಕ ಆರೋಪಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಎಂದು ವರದಿಯಾಗಿದೆ.
ಇದೇ ವೇಳೆ ಜೈ ಶ್ರೀರಾಮ್ ಫ್ಲಕ್ಸ್‍ಗೆ ಪ್ರತಿಕ್ರಿಯೆಯಾಗಿ ಡಿವೈಎಫ್‍ಐ ಕಾರ್ಯಕರ್ತರು ಸ್ಥಳದಲ್ಲೇ ರಾಷ್ಟ್ರ ಧ್ವಜವನ್ನು ನೇತುಹಾಕಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿದೆ. ಒಂದು ವಿಭಾಗವು ಇದರ ವಿರುದ್ಧ ವಿವಾದವನ್ನು ಹುಟ್ಟುಹಾಕಲು ಯತ್ನಿಸುತ್ತಿರುವುದು ಚರ್ಚೆಯಾಗುತ್ತಿದೆ.