ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ಸೇವೆಗಳು ಕಳೆದ ಎರಡು ತಿಂಗಳುಗಳಿಂದ ಹಂತಾನುಹಂತವಾಗಿ ಆರಂಭಗೊಳ್ಳುತ್ತಿದೆ. ಈ ಮಧ್ಯೆ ಶುಕ್ರವಾರದಿಂದ ರಾಜ್ಯಾದ್ಯಂತ ಕೋವಿಡ್ ಪೂರ್ವ ಕಾಲದಂತೆ ಎಲ್ಲಾ ಸೇವೆಗಳು ಈ ಹಿಂದಿನಂತೆಯೇ ಪುನರಾರಂಭಗೊಳ್ಳುವುದೆಂದು ಸರ್ಕಾರ ಗುರುವಾರ ಘೋಶಿಸಿತ್ತು. ಆದರೆ ನಿನ್ನೆ ಯಾವ ಜಿಲ್ಲೆಗಳಲ್ಲೂ ಎಲ್ಲಾ ಬಸ್ ಸೇವೆಗಳನ್ನು ಪುನರಾರಂಭಿಸಲು ಸಾಧ್ಯವಾಗಿಲ್ಲ. ಹಲವಾರು ಬಸ್ ಗಳು ದುರಸ್ಥಿಗೊಳಿಸಬೇಕಾದ ಸ್ಥಿತಿಯಲ್ಲಿದ್ದು ದುರಸ್ಥಿ ಚಟುವಟಿಕೆ ನಡೆಯುತ್ತಿದ್ದು ಪೂರ್ತಿಯಾಗದ ಹಿನ್ನೆಲೆಯಲ್ಲಿ ಸಂಚಾರ ಆರಂಭಿಸಲು ತೊಡಕಾಯಿತೆಂದು ತಿಳಿದುಬಂದಿದೆ. ಈ ಮೂಲಕ ತಪ್ಪಿದ ಬಸ್ ಸೇವೆಗಳು ಶೀಘ್ರವಾಗಿಯೇನೂ ಹಳಿಗೆ ಬರುವಂತೆ ಕಾಣಿಸುತ್ತಿಲ್ಲ.
ಇದರೊಂದಿಗೆ ಸಮರ್ಪಕ ಸಿಬ್ಬಂದಿಗಳ ಕೊರತೆಯೂ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ಸೇವೆಯನ್ನು ಪುನಃಸ್ಥಾಪಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ವಲಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಲಾಕ್‍ಡೌನ್ ನಂತರ ಸ್ಥಗಿತಗೊಂಡ ಸೇವೆಗಳನ್ನು ಸಂಪೂರ್ಣವಾಗಿ ಪುನರಾರಂಭಿಸಬೇಕು ಎಂದು ಕೆಎಸ್.ಆರ್.ಟಿ.ಸಿ. ಸಿಎಂಡಿ ಗುರುವಾರ ನಿರ್ದೇಶಿಸಿದ್ದರು. ಜನವರಿ ವೇಳೆಗೆ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಪ್ರಸ್ತುತ ಇದು ಸಾಧ್ಯವಿಲ್ಲ ಎಂದು ವಲಯ ಅಧಿಕಾರಿಗಳು ಹೇಳುತ್ತಾರೆ. ಸೇವೆಗಳು ಈ ಹಿಂದಿನಂತೆ ಆರಂಭಗೊಳ್ಳಲು ಇನ್ನಷ್ಟು ಸಮಯವಕಾಶಗಳು ಬೇಕಾಗಬಹುದೆಂಬ ಮಾಹಿತಿ ಹೊರಬಂದಿದೆ.
ಎರಡು ಜಿಲ್ಲೆಗಳಲ್ಲಿ ವೇಗದೂತ ಬಸ್ ಗಳು ಮತ್ತು ನಾಲ್ಕು ಜಿಲ್ಲೆಗಳಲ್ಲಿ ಸೂಪರ್ ಫಾಸ್ಟ್‍ಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ನಿರ್ವಹಿಸುವುದಾಗಿ ಸಿಎಂಡಿ ತಿಳಿಸಿತ್ತು. ಕೆಎಸ್.ಆರ್.ಟಿಸಿ. ಮುಂದಿನ ವಾರದೊಳಗೆ ಪೂರ್ಣ ಸೇವೆಯನ್ನು ಪ್ರಾರಂಭಿಸುವ ಆಶಯವನ್ನು ಹೊಂದಿತ್ತು.