ಉಪ್ಪಳ: ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರ ತಂಡ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಇದರ ಬೆನ್ನಿಗೆ ಮುಸಿಂಲೀಗ್ ಸದಸ್ಯರು ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿದ್ದು,ಬಳಿಕ ಸಂಘರ್ಷದ ವಾತಾವರಣ ನಿರ್ಮಾಣವಾದ ಘಟನೆ ಸೋಮವಾರ ನಡೆದಿದೆ.
ಮಂಗಲ್ವಾಡಿ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸುತ್ತಿರುವಂತೆ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಇದನ್ನು ಪ್ರತಿಭಟಿಸಿ ಯೂತ್ ಲೀಗ್ ಕಾರ್ಯಕರ್ತರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದರು. ಈ ಸಂದರ್ಭ ಉದ್ವಿಗ್ನತೆ ಉಂಟಾಯಿತು. ಪ್ರತಿಭಟನಾಕಾರರನ್ನು ಶಾಂತಗೊಳಿಸಲು ನಾಯಕರು ಮತ್ತು ಪೆÇಲೀಸರು ಮಧ್ಯಪ್ರವೇಶಿಸಿದರು.
17 ನೇ ವಾರ್ಡ್ ಅಡ್ಕ ಪ್ರತಿನಿಧಿಯಾಗಿ ವಿಜಯಗಳಿಸಿದ್ದ ಬಿಜೆಪಿ ಸದಸ್ಯ ಮತ್ತು ಯುವ ಮೋರ್ಚಾ ಪಂಚಾಯತ್ ಕಾರ್ಯದರ್ಶಿ ಕಿಶೋರ್ ಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಏತನ್ಮಧ್ಯೆ ಪಾಲಕ್ಕಾಡ್ ಪುರಸಭೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದರು. ಎಲ್‍ಡಿಎಫ್ ಸದಸ್ಯರು ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ಜಾತ್ಯತೀತತೆಯನ್ನು ರಕ್ಷಿಸುವ ಘೋಷಣೆಯೊಂದಿಗೆ ತಮ್ಮನ್ನು ಸಮರ್ಥಿಸಿಕೊಂಡರು. ನಂತರ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎನ್.ಶಿವರಾಜನ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜೈ ಶ್ರೀರಾಮ್ ಎಂಬ ಘೋಷಣೆಗಳೊಂದಿಗೆ ರ್ಯಾಲಿ ನಡೆಸಿದ್ದರು. ಈ ವೇಳೆ ಸಂಘರ್ಷ ನಡೆದು ಹಲವರು ಗಾಯಗೊಂಡಿದ್ದರು.