ಮೈಸೂರು: ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್ ಭೈರಪ್ಪ ಅವರ "ಪರ್ವ' ಕಾದಂಬರಿ ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿ ಜನ ಮನ್ನಣೆಗೊಂಡಿದ್ದು, ಇದೀಗ ರಷ್ಯಾ ಹಾಗೂ ಚೀನಾ ಭಾಷೆಗೆ ಭಾಷಾಂತರಗೊಂಡಿದೆ.
ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಯಿಂದ ಹೇಳಲಾದ ಈ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ಚೀನಿ ಹಾಗೂ ರಷ್ಯನ್ ಭಾಷೆಗಳಿಗೂ ಭಾಷಾಂತರ ಮಾಡಿದೆ.
1979ರಲ್ಲಿ ಮೊದಲು ಮುದ್ರಣ ಕಂಡ ಪರ್ವ ಕಾದಂಬರಿ ನಂತರ 23 ಬಾರಿ ಮರು ಮುದ್ರಣಗೊಂಡು ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ಚೀನಿ ಹಾಗೂ ರಷ್ಯಾ ಭಾಷೆಗೆ ಭಾಷಾಂತರ ಗೊಂಡಿರುವುದು ಭೈರಪ್ಪನವರ ಅಭಿಮಾನಿಗಳಿಗೆ ಸಂತೋಷ ತಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ಭಾರತದ 10 ಕೃತಿಗಳನ್ನು ಇತರ ದೇಶದ ಭಾಷೆಗಳಿಗೆ ಭಾಷಾಂತರಿಸಬೇಕು ಎಂದು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಎಸ್.ಎಲ್ ಭೈರಪ್ಪ ಅವರ "ಪರ್ವ' ಕಾದಂಬರಿ ಸಹ ಭಾಷಾಂತರಗೊಂಡಿದೆ.
ಈ ಸುದ್ದಿಯ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ, ""ರಷ್ಯಾ ಮತ್ತು ಚೀನಾ ಭಾಷೆಗಳಿಗೆ "ಪರ್ವ'ಅನುವಾದ ಗೊಂಡಿರುವುದು ಸಂತಸ ತಂದಿದೆ. ದೇಶ ದೇಶಗಳ ನಡುವೆ ಸಾಹಿತ್ಯದ ಮೂಲಕ ಸಾಂಸ್ಕೃತಿಕ ವಿನಿಮಯ ಆಗುತ್ತಿರುವುದು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯಾಗಲಿದೆ'' ಎಂದರು.
ರಷ್ಯಾ ಮತ್ತು ಚೀನಾ ದೇಶಗಳಿಂದ ಸಹ ಉತ್ತಮ ಸಾಹಿತ್ಯಗಳು ಹೊರ ಬಂದಿದೆ. ಆ ಸಾಹಿತ್ಯಗಳು-ನಮ್ಮ ದೇಶಕ್ಕೆ ಅನುವಾದಗೊಂಡರೆ, ಅಲ್ಲಿನ ಕಲೆ, ಸಂಸ್ಕೃತಿ ತಿಳಿಯಲು ಸಾಧ್ಯವಾಗಲಿದೆ. ಈ ರೀತಿ ಕಾರ್ಯಗಳು ಹೆಚ್ಚಾದರೆ ಸಾಹಿತಿಗಳಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪನವರ 'ಪರ್ವ' ಕಾದಂಬರಿಯನ್ನು ರಂಗ ಪದ್ಯಗೊಳಿಸಿ ನಂತರ ರಂಗ ಪ್ರದರ್ಶನ ಮಾಡಲು ಮುಂದಾಗಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ "ಪರ್ವ' ಕಾದಂಬರಿ ಚೀನಾ ಮತ್ತು ರಷ್ಯಾ ಭಾಷೆಗೆ ಅನುವಾದಗೊಂಡಿರುವುದು ಸಂತಸ ತಂದಿದೆ ಎಂದರು.
ಮುಂದಿನ ಜನವರಿಯಲ್ಲಿ ರಂಗಾಯಣವು ಎಸ್.ಎಲ್ ಭೈರಪ್ಪನವರ ಸಾಹಿತ್ಯ ಪ್ರತಿಷ್ಠಾನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮೆ ಸಂಸ್ಥೆಗಳ ಆಶ್ರಯದಲ್ಲಿ ಅನುವಾದಗೊಂಡ ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ತಿಳಿಸಿದರು.