ವಾಷಿಂಗ್ಟನ್: ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ ಬೆಂಬಲ ನೀಡಿದೆ. ಅಮೆರಿಕದಲ್ಲಿ ಪ್ರತಿಭಟನೆ ನಡೆಸುವ ವೇಳೆ ಸಂಘಟನೆ ಸದಸ್ಯರು ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದಾರೆ.
ವಾಷಿಂಗ್ಟನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಸಮೀಪದ ಮಹಾತ್ಮ ಗಾಂಧಿ ಮೆಮೋರಿಯಲ್ ಪ್ಲಾಜಾ ಬಳಿ ಡಿಸೆಂಬರ್ 12ರಂದು ರೈತರನ್ನು ಬೆಂಬಲಿಸಿ ಖಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆ ಸಂದರ್ಭದಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿ ಸಂಘಟನೆ ಧ್ವಜದಿಂದ ಮಹಾತ್ಮ ಗಾಂಧಿ ಪ್ರತಿಮೆಯ ಮುಖವನ್ನು ಮುಚ್ಚಿ ಅವಮಾನ ಮಾಡಲಾಗಿದೆ. ಗಾಂಧಿ ಪ್ರತಿಮೆಯ ಮುಖಕ್ಕೆ ಬಣ್ಣವನ್ನು ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕೆಲವು ದಿನಗಳ ಹಿಂದೆ ಲಂಡನ್‌ನಲ್ಲಿಯೂ ಖಲಿಸ್ತಾನ ಪ್ರತ್ಯೇಕತಾವಾದಿ ಸಂಘಟನೆ ಸದಸ್ಯರು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈಗ ಅದೇ ಮಾದರಿಯ ಘಟನೆ ವಾಷಿಂಗ್ಟನ್‌ನಲ್ಲಿ ನಡೆದಿದ್ದು, ರಾಯಭಾರ ಕಚೇರಿ ಸ್ಥಳೀಯ ಆಡಳಿತಕ್ಕೆ ದೂರು ನೀಡಿದೆ.
ಪ್ರತಿಭಟನೆ ವಿಡಿಯೋ
ಮೆಟ್ರೋ ಪಾಲಿಟನ್ ಮತ್ತು ನ್ಯಾಷನಲ್ ಪಾರ್ಕ್ ಪೊಲೀಸರಿಗೆ ಘಟನೆ ಬಗ್ಗೆ ಭಾರತೀಯ ರಾಯಭಾರ ಕಚೇರಿ ದೂರು ನೀಡಿದೆ. ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಭಾರತೀಯ ರಾಯಭಾರಿಗೆ ಕರೆ ಮಾಡಿ ವಿವಾದದ ಕುರಿತು ಮಾಹಿತಿ ನೀಡಿದ್ದಾರೆ, ಘಟನೆ ಬಗ್ಗೆ ಕ್ಷಮೆ ಕೇಳಿದ್ದಾರೆ.
ಮಹಾತ್ಮ ಗಾಂಧಿ ಮೆಮೋರಿಯಲ್ ಪ್ಲಾಜಾ ಬಳಿ ಸೆಪ್ಟೆಂಬರ್ 16, 2000ದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿತ್ತು. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ಆಗ ಬಿಲ್ ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿದ್ದರು.
ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ಖಂಡಿಸಿ ಪಂಜಾಬ್ ಮತ್ತು ಹರ್ಯಾಣ ರಾಜ್ಯದ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದ್ದು, ರೈತರ ಜೊತೆಗಿನ ಮಾತುಕತೆ ವಿಫಲವಾಗಿದೆ.