ನವದೆಹಲಿ:ಸಾಲ ಮರು ಪಾವತಿ ವಿನಾಯತಿ ಅವಧಿ (ಮೊರಟೋರಿಯಂ ಅವಧಿ)ಯನ್ನು ವಿಸ್ತರಿಸುವುದು ಕಾರ್ಯಸಾಧುವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾದ ಸಾಲ ಮರು ಪಾವತಿ ವಿನಾಯತಿ ಅವಧಿ (ಮೊರಟೋರಿಯಂ ಅವಧಿ)ಯಲ್ಲಿ ಸಾಲದ ಮೇಲೆ ಬಡ್ಡಿ ವಿಧಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ಧಾರದ ವಿರುದ್ಧ ಸಲ್ಲಿಸಲಾದ ಮನವಿಗಳನ್ನು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆ ನಡೆಸಿತು.
ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪ್ರತಿನಿಧಿಸಿದ ವಕೀಲ ವಿ. ಗಿರಿ, ಕಾರ್ಪೋರೇಟ್ ಹಾಗೂ ವೈಯಕ್ತಿಕ ಸಾಲಗಳ ಸಾಲ ಮರು ಪರಿಹಾರ ಯೋಜನೆ ''ಕೋವಿಡ್-19 ಸಂಬಂಧಿತ ಒತ್ತಡಕ್ಕೆ ಮರು ಪರಿಹಾರ ಕಾರ್ಯಚೌಕಟ್ಟು'' ಕುರಿತು ಆಗಸ್ಟ್ 6ರಂದು ಬ್ಯಾಂಕ್ ಹೊರಡಿಸಿದ ಸುತ್ತೋಲೆಯ 3ನೇ ಉಪ ವಾಕ್ಯವನ್ನು ಉಲ್ಲೇಖಿಸಿದರು. ಆಡಳಿತ ಮಂಡಳಿಯ ಅನುಮೋದಿತ ನೀತಿಗೆ ಅನುಗುಣವಾಗಿ ನಿರ್ದೇಶನಕ್ಕೊಳಗಾದ ಸಾಲ ನೀಡುವ ಸಂಸ್ಥೆಗಳು ಅರ್ಹ ಸಾಲಗಾರರಿಗೆ ಕಾರ್ಯಸಾಧುವಾದ ಸಾಲ ಮರು ಪರಿಹಾರ ಯೋಜನೆಗಳನ್ನು ಸಿದ್ಧಪಡಿಸಿದೆ. ಆದರೆ, ಕೊರೋನ ಸಾಂಕ್ರಾಮಿಕ ರೋಗದ ಬಾಧೆಗೆ ಒಳಗಾದ ಸಾಲಗಾರರಿಗೆ ಮಾತ್ರ ಈ ಮರು ಪರಿಹಾರವನ್ನು ಒದಗಿಸಲಾಗುತ್ತದೆಯೇ ಎಂಬ ಬಗ್ಗೆ ಸಾಲಗಾರರು ಖಾತರಿಪಡಿಸಿಕೊಳ್ಳುತ್ತಾರೆ ಎಂದು ಗಿರಿ ಹೇಳಿದ್ದಾರೆ. ಸುತ್ತೋಲೆಯಲ್ಲಿ ಉಲ್ಲೇಖಿಸಲಾದ ಸೌಲಭ್ಯಗಳನ್ನು ಮಾತ್ರ ಸಾಲಗಾರರು ಪಡೆಯಲು ಸಾಧ್ಯ ಎಂದು ಬ್ಯಾಂಕ್ ಹೇಳಿದೆ.
ಆದುದರಿಂದ ಭಾರತೀಯ ರಿಸರ್ವ್ ಬ್ಯಾಂಕ್‌ನ ಆಗಸ್ಟ್ 6ರ ಸುತ್ತೋಲೆಯ ಸೌಲಭ್ಯಗಳನ್ನು ಬಳಸುವುದಾಗಿ ಸಾಲಗಾರರು ತಿಳಿಸಬೇಕೇ ಎಂದು ಪೀಠ ಪ್ರಶ್ನಿಸಿದೆ. ಸುತ್ತೋಲೆಯಲ್ಲಿ ಸಾಲಗಾರರಿಗೆ ಇರುವ ಸೌಲಭ್ಯಗಳ ಕುರಿತ ಅಂಶಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೂಚಿಸಿದರು. ಕೋವಿಡ್-19ನಿಂದ ಆರ್ಥಿಕತೆ ಕುಸಿತಕ್ಕೆ ಒಳಗಾಗಿದೆ. ಇದರಿಂದ ಸಾಲಗಾರರ ಮೇಲೆ ಉಂಟಾದ ಪರಿಣಾಮ ತಗ್ಗಿಸಲು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆಗಸ್ಟ್ 6ರಂದು ಕಾರ್ಯಚೌಕಟ್ಟನ್ನು ಬಿಡುಗಡೆ ಮಾಡಲಾಯಿತು ಎಂದು ಆರ್‌ಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿತು.