ನವದೆಹಲಿ: ಕೊರೊನಾ ರೂಪಾಂತರ ಸೋಂಕಿನ ಆತಂಕದ ನಡುವೆ, 2021ರ ಗಣರಾಜ್ಯೋತ್ಸವದಲ್ಲಿ ಭಾರೀ ಬದಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಂಪು ಕೋಟೆಯಲ್ಲದೇ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಪರೇಡ್ ಕೊನೆಯಾಗಲಿದೆ. ಜೊತೆಗೆ 8.2 ಕಿ.ಮೀನಿಂದ 3.3 ಕಿ.ಮೀಗೆ ಪರೇಡ್ ಅಂತರವನ್ನು ಅರ್ಧಕ್ಕೆ ಇಳಿಸಲಾಗಿದೆ.
ರಾಜಪಥ್ ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಕೆಲವೇ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಬಾರಿ ಪರೇಡ್ ವೀಕ್ಷಿಸಲು ಎಲ್ಲೆಡೆಯಿಂದ 1,00,000ಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಆದರೆ ಈ ವರ್ಷ 25,000 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಪರೇಡ್ ನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿ ಇಲ್ಲ.
ಕೋವಿಡ್ ನಿಯಮಾವಳಿ ಪ್ರಕಾರ ಪರೇಡ್ ನಡೆಸುವ ತುಕಡಿಗಳು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿಯಿಂದ ಪರೇಡ್ ನಡೆಸುವ ತುಕಡಿಗಳ ಗಾತ್ರವೂ ಚಿಕ್ಕದಾಗಿರುತ್ತದೆ. 144 ಮಂದಿ ಬದಲು 96 ಮಂದಿಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೇಡ್ ಈ ಬಾರಿ ವಿಜಯ್ ಚೌಕ್ ನಿಂದ ಆರಂಭಗೊಂಡು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಗೊಳ್ಳುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯೂ ಕಡಿಮೆ ಇರುವುದಾಗಿ ತಿಳಿದುಬಂದಿದೆ.
ಭಾರತದಲ್ಲಿ ಡಿ.29ರ ವರದಿಯಂತೆ 16,432 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 24,900 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 252 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.