ನವದೆಹಲಿ: ದೇಶದ ಎಲ್ಲ ರೈತ ಸಂಘಟನೆಗಳನ್ನೂ ಮಾತುಕತೆಗೆ ಆಹ್ವಾನಿಸದ ಹೊರತು ತಾವು ಮಾತುಕತೆ ಬರುವುದಿಲ್ಲ ಎಂದು ಪಂಜಾಬ್ ರೈತ ಸಂಘರ್ಷ ಸಮಿತಿ ಹೇಳಿದೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತಪರ ಸಂಘಟನೆಗಳ ದೆಹಲಿ ಚಲೋ ಪ್ರತಿಭಟನೆ ಮುಂದುವರೆದಿದ್ದು, ನಿನ್ನೆಯಷ್ಟೇ ಕೇಂದ್ರ ಸರ್ಕಾರ ರೈತ ಸಂಘಟನೆಗಳನ್ನು ಚರ್ಚೆಗೆ ಆಹ್ವಾನಿಸಿತ್ತು. ಆದರೆ ಕೇಂದ್ರ ಸರ್ಕಾರದ ಈ ನಡೆಯನ್ನು ಟೀಕಿಸಿರುವ ರೈತ ಪರ ಸಂಘಟನೆಗಳು ದೇಶದ ಎಲ್ಲ ರೈತ ಸಂಘಟನೆಗಳನ್ನೂ ಮಾತುಕತೆಗೆ ಆಹ್ವಾನಿಸದ ಹೊರತು ತಾವು ಮಾತುಕತೆ ಬರುವುದಿಲ್ಲ ಎಂದು ಹೇಳಿವೆ.
ಈ ಕುರಿತಂತೆ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ರೈತ ಸಂಘರ್ಷ ಸಮಿತಿಯ ಜಂಟಿ ಕಾರ್ಯದರ್ಶಿ ಸುಖ್‌ವಿಂದರ್ ಎಸ್ ಸಭರನ್ ಅವರು, ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಚರ್ಚೆಗೆ ಬರುವುದಿಲ್ಲ. ದೇಶದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಆದರೆ ಸರ್ಕಾರ ಕೇವಲ 32 ಸಂಘಟನೆಗಳನ್ನು ಮಾತುಕತೆಗೆ ಕರೆದಿದೆ. ಎಲ್ಲ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸದಿದ್ದರೆ ನಾವೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ದೆಹಲಿ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಚರ್ಚೆಗೆ ಆಹ್ವಾನಿಸಿದ ಬೆನ್ನಲ್ಲೇ ಸಮಿತಿಯು ಈ ಪ್ರತಿಕ್ರಿಯೆ ನೀಡಿದ್ದಾರೆ.
ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಚಳಿ ಮತ್ತು ಕೋವಿಡ್-19 ಅನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3ಕ್ಕಿಂತಲೂ ಮೊದಲೇ ನಾವು ರೈತ ಸಂಘಗಳ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದರು.