HEALTH TIPS

ಕ್ಷಿಪಣಿಗಿಂತಲೂ ಮೊಬೈಲ್‌ ಹೆಚ್ಚು ಅಪಾಯಕಾರಿ: ರಾಜನಾಥ್‌ ಸಿಂಗ್‌

         ಚಂಡೀಗಡ: 'ದೇಶಗಳ ನಡುವಣ ಸಂಘರ್ಷದಲ್ಲಿ ಸಾಮಾಜಿಕ ಮಾಧ್ಯಮಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಕ್ಷಿಪಣಿಗಿಂತಲೂ ಮೊಬೈಲ್‌ಗಳು ಹೆಚ್ಚು ಅಪಾಯಕಾರಿಯಾಗಿವೆ. ಅವುಗಳ ವ್ಯಾಪ್ತಿಯೂ ಸಾಕಷ್ಟು ವಿಸ್ತರಿಸಿದೆ' ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

       ವಾರ್ಷಿಕ ಮಿಲಿಟರಿ ಸಾಹಿತ್ಯೋತ್ಸವದ ಹಿನ್ನೆಲೆಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು 'ದಿನಗಳು ಉರುಳಿದಂತೆ ಯುದ್ಧ ಹಾಗೂ ಬೆದರಿಕೆಯ ಸ್ವರೂಪಗಳೂ ಬದಲಾಗುತ್ತಿವೆ. ಭವಿಷ್ಯದಲ್ಲಿ ಭಿನ್ನ ಬಗೆಯ ಭದ್ರತಾ ತೊಡಕುಗಳು ಎದುರಾಗುವ ಅಪಾಯವಿದೆ' ಎಂದು ಕಳವಳ ವ್ಯಕ್ತಪಡಿಸಿದರು.

        'ಈಗ ಮೊಬೈಲ್‌ನ ವ್ಯಾಪ್ತಿ ವಿಸ್ತರಿಸಿದೆ. ಶತ್ರುಗಳು ಗಡಿ ದಾಟದೆಯೇ ನಮ್ಮ ಭೂ ಭಾಗದೊಳಗೆ ಪ್ರವೇಶಿಸಬಹುದು. ಇಲ್ಲಿನ ಜನರ ಮನಸ್ಸನ್ನು ಆಕ್ರಮಿಸಬಹುದು. ಹೀಗಾಗಿ ನಾಡಿನ ಪ್ರತಿಯೊಬ್ಬರೂ ಸೈನಿಕನ ಪಾತ್ರ ನಿಭಾಯಿಸಬೇಕು' ಎಂದು ಕರೆ ನೀಡಿದರು.

        'ಈ ಅಪಾಯಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ, ಪ್ರಚೋದಿತ ಹಾಗೂ ದುರುದ್ದೇಶಪೂರಿತ ಮಾಹಿತಿಗಳಿಂದ ನಾವೆಲ್ಲ ದೂರ ಇರಬೇಕು. ಇಂತಹ ವಿಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಿಲಿಟರಿ ಸಾಹಿತ್ಯೋತ್ಸವದಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ' ಎಂದು ಅವರು ತಿಳಿಸಿದರು.

        ತಮ್ಮ ಭಾಷಣದ ಉದ್ದಕ್ಕೂ ಅವರು ಚೀನಾದ ಹೆಸರನ್ನು ಉಲ್ಲೇಖಿಸದೆಯೇ ಆ ರಾಷ್ಟ್ರದ ಕುತಂತ್ರಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದರು. ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಶುರುವಾದ ಬಳಿಕ ಭಾರತವು ಟಿಕ್‌ ಟಾಕ್‌ ಸೇರಿದಂತೆ ಚೀನಾ ಒಡೆತನದ ಹಲವು ಮೊಬೈಲ್‌ ಆಯಪ್‌ಗಳನ್ನು ನಿಷೇಧಿಸಿತ್ತು.

        'ಈ ಸಲದ ಸಾಹಿತ್ಯೋತ್ಸವ ತುಂಬಾ ವಿಶೇಷವಾದುದು. ಏಕೆಂದರೆ 'ವಿಜಯ ದಿವಸ'ದ ಬೆನ್ನಲ್ಲೇ ಇದು ಆಯೋಜನೆಗೊಂಡಿದೆ. 1971ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ನಮ್ಮ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಾಡಿಗೆ ಗೆಲುವು ತಂದುಕೊಟ್ಟಿದ್ದರು. ಅವರ ತ್ಯಾಗ ಮತ್ತು ಬಲಿದಾನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು' ಎಂದರು.

        ಪಂಜಾಬ್‌ ಸರ್ಕಾರ ಹಾಗೂ ಭದ್ರತಾ ಪಡೆ ಜಂಟಿಯಾಗಿ ಆಯೋಜಿಸಿರುವ ಈ ಸಾಹಿತ್ಯೋತ್ಸವದಲ್ಲಿ ಪಂಜಾಬ್‌ ರಾಜ್ಯಪಾಲ ವಿ.ಪಿ.ಸಿಂಗ್‌ ಬದನೂರ್‌ ಮತ್ತು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಎನ್‌.ಎನ್‌.ವೊಹ್ರಾ ಅವರೂ ಪಾಲ್ಗೊಂಡು ಮಾತನಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries