ಅಯೋಧ್ಯೆ: 'ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯು, ವಕ್ಫ್ ಕಾಯ್ದೆಗೆ ವಿರುದ್ಧವಾಗಿದೆ ಮತ್ತು ಶರೀಯತ್ ಕಾನೂನಿನ ಪ್ರಕಾರ ನಿಯಮಬಾಹಿರವಾಗಿದೆ' ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಸದಸ್ಯ ಜಫರ್‌ಯಾಬ್ ಜಿಲಾನಿ ಬುಧವಾರ ಹೇಳಿದ್ದಾರೆ.
'ವಕ್ಫ್ ಕಾಯ್ದೆಯ ಪ್ರಕಾರ ಮಸೀದಿ ಅಥವಾ ಮಸೀದಿಯ ಜಾಗವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿಯು ಈ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ವಕ್ಫ್ ಕಾಯ್ದೆಯು ಶರೀಯತ್ ಅನ್ನು ಆಧರಿಸಿರುವುದರಿಂದ ಅದನ್ನೂ ಉಲ್ಲಂಘಿಸುತ್ತಿದೆ' ಎಂದು ಬಾಬರಿ ಮಸೀದಿ ಕ್ರಿಯಾ ಸಮಿತಿ ಸಂಚಾಲಕರೂ ಆಗಿರುವ ಅವರು ತಿಳಿಸಿದ್ದಾರೆ.
'ಪ್ರತಿಯೊಬ್ಬರೂ ಶರೀಯತ್ ಅನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ ಮತ್ತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಭೂಮಿ ಮಂಜೂರು ಮಾಡಿರುವುದರಿಂದ ಇದು ಕಾನೂನುಬಾಹಿರವಾಗದು' ಎಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ರಚಿಸಿರುವ ಟ್ರಸ್ಟ್‌ನ ಕಾರ್ಯದರ್ಶಿ ಅಥರ್ ಹುಸೇನ್ ತಿಳಿಸಿದ್ದಾರೆ.
ಅಯೋಧ್ಯೆಯ ಧನ್ನಿಪುರ ಗ್ರಾಮದ ಐದು ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸೀದಿ ಮತ್ತು ಆಸ್ಪತ್ರೆಯ ನೀಲನಕ್ಷೆಯನ್ನು ಈಚೆಗೆ ಲಖನೌನ ಇಂಡೊ-ಇಸ್ಲಾಮಿಕ್ ಸಾಂಸ್ಕೃತಿಕ ಪ್ರತಿಷ್ಠಾನದ (ಐಐಸಿಎಫ್) ಕಚೇರಿಯಲ್ಲಿ ಅನಾವರಣಗೊಳಿಸಲಾಗಿತ್ತು.
ಮಸೀದಿ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಐಐಸಿಎಫ್ ಅನ್ನು ರಚಿಸಿದೆ.
'ಬೇರೆಡೆ ಮಸೀದಿ ನಿರ್ಮಾಣಕ್ಕಾಗಿ ಜಾಗ ಪಡೆದುಕೊಳ್ಳುವ ಪ್ರಸ್ತಾವವನ್ನು ನಾವು ನಿರಾಕರಿಸಿದ್ದೇವೆ. ನಮಗೆ ಮಸೀದಿಗೆ ಜಾಗ ಅಗತ್ಯವಿಲ್ಲ' ಎಂದು ಎಐಎಂಪಿಎಲ್‌ಬಿ ಕಾರ್ಯಕಾರಿ ಸಮಿತಿ ಸದಸ್ಯ ಇಲ್ಯಾಸ್ ಹೇಳಿದ್ದಾರೆ.
ಸರ್ಕಾರದ ಒತ್ತಡದಲ್ಲಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಕಾರ್ಯನಿರ್ವಹಿಸುತ್ತಿದೆ ಎಂದೂ ಅವರು ಆರೋಪಿಸಿದ್ದಾರೆ.