ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧದ ರೈತರ ಪ್ರತಿಭಟನೆಯು ಒಂದು ತಿಂಗಳು ದಾಟಿ ಮುಂದೆ ಸಾಗುತ್ತಿದೆ. ಈ ನಡುವೆ ಹಲವಾರು ಮಂದಿ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಪ್ರತಿಭಟನೆ ನಡೆಯುತ್ತಿರುವ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ ಹಾಗೂ ಆಹಾರ ಸಾಮಗ್ರಿ ಸೇರಿದಂತೆ ಹಲವಾರು ವಸ್ತುಗಳನ್ನು ನೀಡುವ ಮೂಲಕ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇದೀಗ ಪ್ರತಿಭಟನಾನಿರತ ರೈತರಿಗೆ ಕೇರಳದ ರೈತರು ಟ್ರಕ್ ತುಂಬಾ ಪೈನಾಪಲ್ ಗಳನ್ನು ಕಳುಹಿಸಿರುವ ಕುರಿತು ಮಾಧ್ಯಮಗಳು ವರದಿ ಮಾಡಿದೆ.
'ವಾಝಕ್ಕುಳಮ್ ಪೈನಾಪಲ್' ಎಂದೆ ಪ್ರಸಿದ್ಧಿಯಾಗಿರುವ ಈ ಹಣ್ಣನ್ನು ವಾಝಕ್ಕುಳಮ್ ಎಂಬ ಪ್ರದೇಶದಲ್ಲೇ ಬೆಳೆಸಲಾಗುತ್ತದೆ. ಸುಮಾರು 20 ಟನ್ ಗಿಂತಲೂ ಹೆಚ್ಚಿನ ಪೈನಾಪಲ್ ಅನ್ನು ಒಂದು ಟ್ರಕ್ ನಲ್ಲಿ ತುಂಬಿಸಿ ದಿಲ್ಲಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಪೈನಾಪಲ್ ಬೆಳೆಯುವ ರೈತರ ಅಸೋಸಿಯೇಶನ್ ನಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಗುರುವಾರದಂದು ಕೇರಳದಿಂದ ಪೈನಾಪಲ್ ತುಂಬಿಕೊಂಡು ಹೊರಟ ಟ್ರಕ್ ಗೆ ಕೇರಳದ ಕೃಷಿ ಮಂತ್ರಿ ವಿ. ಸುನೀಲ್ ಕುಮಾರ್ ಹಸಿರು ನಿಶಾನೆ ತೋರಿದರು. 'ಪಂಜಾಬ್ ನ ರೈತರು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ನಾವು ಈ ಮೂಲಕ ಬೆಂಬಲ ಸೂಚಿಸಿದ್ದೇವೆ ಎಂದು ಪೈನಾಪಲ್ ಅಸೋಸಿಯೇಶನ್ ನ ಪದಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಬೇಡಿಕೆ ಹೆಚ್ಚಿದ್ದ ಸಂದರ್ಭಗಳಲ್ಲಿ ವಾಝಕ್ಕುಳಮ್ ನಿಂದ ಸುಮಾರು 1400 ಟನ್ ಗೂ ಹೆಚ್ಚಿನ ಪೈನಾಪಲ್ ಗಳು ಭಾರತದಾದ್ಯಂತ ಪೂರೈಕೆಯಾಗುತ್ತವೆ ಎಂದು ವರದಿ ತಿಳಿಸಿದೆ.