ನವದೆಹಲಿ:ಕೋವಿಡ್ ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ.
ಈ ಬೆಳವಣಿಗೆಯನ್ನು ಕೊರೋನಾಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದ್ದು, ವಿಶ್ವದ ಮೊದಲ ಕೊರೋನಾ ವೈರಸ್ ಲಸಿಕೆಯೂ ಆಗಿದೆ ಎಂದು ಹೇಳಲಾಗುತ್ತಿದೆ.
ಈ ಲಸಿಕೆ ಮುಂದಿನ ವಾರದ ವೇಳೆಗೆ ಚಲಾವಣೆಗೆ ಬರಲಿದ್ದು, ಕೋವಿಡ್-19 ನಿಯಂತ್ರಿಸಲು ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸುವುದನ್ನು ಪ್ರಾರಂಭಿಸಿದ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಬ್ರಿಟನ್ ಕೂಡ ಒಂದಾಗಿರಲಿದೆ.
ಬ್ರಿಟನ್ ನಂತೆಯೇ ಇತರ ರಾಷ್ಟ್ರಗಳೂ ಸಹ ತಮ್ಮ ಪ್ರಜೆಗಳಿಗೆ ಕೋವಿಡ್-19 ಲಸಿಕೆಯನ್ನು ನೀಡುವುದಕ್ಕೆ ತುದಿಗಾಲಲ್ಲಿ ನಿಂತಿವೆ.
ಬ್ರಿಟನ್ ಸರ್ಕಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಲಸಿಕೆ ಮುಂದಿನ ವಾರದಿಂದ ಲಭ್ಯವಾಗಲಿದೆ ಎಂದು ಹೇಳಿದೆ.
ಬ್ರಿಟನ್, 20 ಮಿಲಿಯನ್ ಮಂದಿಗೆ ಆಗುವಷ್ಟು ಫಿಜರ್ ಲಸಿಕೆಗೆ ಬೇಡಿಕೆ ಇಟ್ಟಿದೆ. ಆದರೆ ವರ್ಷಾಂತ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.