ನವದೆಹಲಿ: ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಅಭಿವೃದ್ಧಿಪಡಿಸಿರುವ 'ಕೋವಿಶೀಲ್ಡ್' ಹೆಸರಿನ ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆಯ 1.1 ಕೋಟಿ ಡೋಸ್ ಖರೀದಿಸಲು ಕೇಂದ್ರ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ. ಪ್ರತಿ ಡೋಸ್ ದರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿ ₹210 ಆಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಸಿಕೆಯ ರವಾನೆ ಸೋಮವಾರ ಸಂಜೆಯಿಂದಲೇ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪ್ರತಿ ಡೋಸ್ ಲಸಿಕೆಯ ದರ ₹200 ಆಗಿದ್ದು, ಜಿಎಸ್‌ಟಿ ಸೇರಿ ₹210 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಖಾಸಗಿ ವಲಯದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಖರೀದಿ ಆದೇಶವನ್ನು ಹೊರಡಿಸಿದೆ. ಈ ಲಸಿಕೆಯನ್ನು ದೇಶದಾದ್ಯಂತ ಇರುವ 60 ರವಾನೆ ಕೇಂದ್ರಗಳಿಗೆ ಕಳುಹಿಸಿ, ನಂತರ ಆ ಕೇಂದ್ರಗಳಿಂದ ಇತರೆ ಪ್ರದೇಶಗಳಿಗೆ ವಿತರಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿದವು.
ಭಾರತ್ ಬಯೋಟೆಕ್ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ 'ಕೋವ್ಯಾಕ್ಸಿನ್' ಲಸಿಕೆಯ ಖರೀದಿ ಆದೇಶಕ್ಕೂ ಆರೋಗ್ಯ ಸಚಿವಾಲಯವು ಶೀಘ್ರದಲ್ಲೇ ಸಹಿ ಹಾಕುವ ಸಾಧ್ಯತೆ ಇದ್ದು, ಈ ಕುರಿತ ಸಭೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ತುರ್ತು ಸಂದರ್ಭದಲ್ಲಿ ಈ ಎರಡೂ ಲಸಿಕೆಗಳ ಬಳಕೆಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಅನುಮತಿ ನೀಡಿತ್ತು. ಲಸಿಕೆಗಳು ಸುರಕ್ಷಿತವಾಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಸಚಿವಾಲಯವು ಹೇಳಿತ್ತು.
ಜ.16ರಿಂದ ಕೋವಿಡ್-19 ಲಸಿಕಾ ಅಭಿಯಾನವನ್ನು ಆರಂಭಿಸಲಿದ್ದು, ಮೊದಲಿಗೆ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಆದ್ಯತೆ ನೀಡಲಾಗಿದೆ. ನಂತರದಲ್ಲಿ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.