ನವದೆಹಲಿ: ಕೊರೋನಾ-19 ಸಾಂಕ್ರಾಮಿಕ ರೋಗ ಜಾಗತಿಕ ಮಟ್ಟದಲ್ಲಿ ಅಸಮಾನತೆಯನ್ನು ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿದ್ದು, ಬಡವರ ಆರ್ಥಿಕ ಚೇತರಿಕೆಗೆ ದಶಕಗಳೇ ಬೇಕೆನ್ನುತ್ತಿದೆ ಆಕ್ಸ್ ಫಾಮ್ಸ್ ಅಸಮಾನತೆ ವೈರಸ್ ವರದಿ
ಜ.25 ರಂದು ಈ ವರದಿ ಪ್ರಕಟಗೊಂಡಿದ್ದು, ಕೊರೋನಾ ಅವಧಿಯಲ್ಲಿ ಶ್ರೀಮಂತರು ತಮಗಾದ ವ್ಯಾವಹಾರಿಕ ನಷ್ಟವನ್ನು ಮರಳಿ ಸರಿದೂಗಿಸಿಕೊಳ್ಳುವುದಷ್ಟೇ ಅಲ್ಲದೇ ಆದಾಯವನ್ನೂ ಹೆಚ್ಚಿಸಿಕೊಂಡಿದ್ದಾರೆ.
ವರದಿಯ ಪ್ರಕಾರ ಕೋವಿಡ್-19 ಅವಧಿಯಲ್ಲಿ ಅಂದರೆ ಮಾರ್ಚ್ 2020 ರಿಂದ ಈ ವರೆಗೂ ಭಾರತದ 100 ಬಿಲಿಯನೇರ್ ಗಳ ಆದಾಯ 12.98 ಲಕ್ಷ ಕೋಟಿಯಷ್ಟು ಏರಿಕೆ ಕಂಡಿದ್ದು, 138 ಮಿಲಿಯನ್ ಬಡ ಭಾರತೀಯರಿಗೆ ತಲಾ 94,045 ರೂಪಾಯಿಗಳನ್ನು ನೀಡಬಹುದಾದಷ್ಟು ಬೃಹತ್ ಮೊತ್ತ ಇದಾಗಿದೆ ಎಂದು ವರದಿ ಹೇಳಿದೆ.
ಬಿಲಿಯನ್ ಗಟ್ಟಲೆ ಭಾರತೀಯರು ತಮ್ಮ ದಿನನಿತ್ಯದ ಅಗತ್ಯತೆಗಳನ್ನು ಪೂರೈಸುವುದಕ್ಕೆ ಶ್ರಮಿಸುತ್ತಿದ್ದರೆ, ಇತ್ತ ಸೂಪರ್ ರಿಚ್ ವರ್ಗದ ಜನತೆ ಹೇಗೆ ಮತ್ತಷ್ಟು ಶ್ರೀಮಂತರಾಗುವುದಕ್ಕೆ ಸಾಧ್ಯವಾಯಿತು ಎಂಬ ಬಗ್ಗೆಯೂ ಸಹ ವರದಿ ಬೆಳಕು ಚೆಲ್ಲಿದೆ.
ಪ್ರಾರಂಭದ ದಿನಗಳಲ್ಲಿ ಕೊರೋನಾ ವೈರಸ್ ಎಲ್ಲರನ್ನೂ ಹೇಗೆ ಸಮಾನವಾಗಿರಿಸಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಕ್ರಮೇಣ ಅಸಮಾನತೆಯ ಕಂದಕವನ್ನು ಹೆಚ್ಚು ಮಾಡಿದೆ.
ಕೌಶಲ್ಯವಿಲ್ಲದ ಕಾರ್ಮಿಕ ಮುಖೇಶ್ ಅಂಬಾನಿ ಒಂದು ಗಂಟೆಯಲ್ಲಿ ಗಳಿಸಿದಷ್ಟು ಹಣವನ್ನು ತಾನು ಗಳಿಸುವುದಕ್ಕೆ 10,000 ವರ್ಷಗಳನ್ನು ತೆಗೆದುಕೊಳ್ಳುವಂತಹ ಪರಿಸ್ಥಿತಿಯನ್ನು ಕೋವಿಡ್-19 ತಂದೊಡ್ಡಿದೆ ಎಂದು ಆಕ್ಸ್ ಫಾಮ್ ವರದಿಯಲ್ಲಿ ಹೇಳಿದೆ.
ಕೋವಿಡ್-19 ಅವಧಿಯಲ್ಲಿ 11 ಬಿಲಿಯನೇರ್ ಗಳು ಗಳಿಸಿದ ಹಣ ಎನ್ ಆರ್ ಇಜಿಎಸ್ ಯೋಜನೆಯನ್ನು 10 ವರ್ಷಗಳ ಕಾಲ ಅಥವಾ ಆರೋಗ್ಯ ಸಚಿವಾಲಯವನ್ನು 10 ವರ್ಷಗಳ ಕಾಲ ನಿರಾತಂಕವಾಗಿ ನಿಭಾಯಿಸಬಹುದಾದಷ್ಟಾಗಿದೆ ಎಂದು ವರದಿ ಹೇಳಿದೆ.
122 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಈ ಪೈಕಿ ಶೇ.75 ರಷ್ಟು ಮಂದಿ ಸಂಘಟಿತ ಕ್ಷೇತ್ರದವರಾಗಿದ್ದಾರೆ, ಏಪ್ರಿಲ್ 2020 ರಲ್ಲಿ ಪ್ರತಿ ಗಂಟೆಗೆ 170,000 ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದರು ಎಂದು ಹೇಳಿದೆ.
ದೇಶದ 954 ಶ್ರೀಮಂತ ಕುಟುಂಬಗಳ ಮೇಲೆ ಶೇ.4 ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ ಭಾರತದ ಜಿಡಿಪಿ ಶೇ.1 ರಷ್ಟು ಏರಿಕೆಯಾಗಬಹುದು ಎಂದೂ ವರದಿ ಹೇಳಿದೆ.