ಕಾಸರಗೋಡು : ಜಿಲ್ಲೆಯ 102ಮಂದಿ ಸೇರಿ ರಾಜ್ಯದಲ್ಲಿ ಶನಿವಾರ 6282ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. ರಾಜ್ಯದಲ್ಲಿ 18 ಮಂದಿ ಕೋವಿಡ್‍ನಿಂದ ಸಾವಿಗೀಡಾಗಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 3722ಕ್ಕೇರಿದೆ. ಕಾಸರಗೋಡು ಜಿಲ್ಲೆಯ ಇಬ್ಬರು ಸೇರಿ ರಾಜ್ಯದಲ್ಲಿ ಶನಿವಾರ 51ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಕೋವಿಡ್ ಬಾಧಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿರುವವರಲ್ಲಿ ಕಾಸರಗೋಡು ಜಿಲ್ಲೆಯ 33 ಮಂದಿ ಸೇರಿ ರಾಜ್ಯದಲ್ಲಿ ಶನಿವಾರ 7032ಮಂದಿ ಗುಣಮುಖರಾಗಿದ್ದಾರೆ.
ಬಿಗು ನಿಯಂತ್ರಣ:
ಕೇರಳದಲ್ಲಿ ಕೊರೊನಾ ಹರಡುವಿಕೆಯಲ್ಲಿ ಮತ್ತೆ ಹೆಚ್ಚಳವುಂಟಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ನಿಯಂತ್ರಣ ಕ್ರಮ ಬಿಗುಗೊಳಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಬಗ್ಗೆ ಪೊಲೀಸರು ನಿಗಾವಹಿಸುತ್ತಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕೇಸು ದಾಖಲು, ದಂಡ ಹೇರುವಿಕೆ ಸಹಿತ ವಿವಿಧ ಕ್ರಮ ಕೈಗೊಳ್ಳುತ್ತಿದ್ದಾರೆ. ಜನ ಗುಂಪುಸೇರದೆ, ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಮಾಹಿತಿ ನೀಡುತ್ತಿದ್ದಾರೆ. ರಾತ್ರಿ ಹತ್ತರ ನಂತರ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಿದ್ದು, ಅಂಗಡಿ ಮುಂಗಟ್ಟು ತೆರೆದು ಕಾರ್ಯಾಚರಿಸದಂತೆ ಸೂಚಿಸಲಾಗಿದೆ.