ಗ್ಯಾಂಗ್ಟೋಕ್: ಶಾಲೆಗಳಲ್ಲಿ ಭಾಷೆ ಕಲಿಕೆಗೆ ಸಂಬಂಧಿಸಿದಂತೆ ಸಿಕ್ಕಿಂ ಸರ್ಕರ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಕ್ರಮಕ್ಕೆ 11 ಸ್ಥಳೀಯ ಭಾಷೆಗಳನ್ನು ಸೇರ್ಪಡೆಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸದ್ಯ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ಭೂತಿಯಾ, ನೇಪಾಳಿ, ಲೆಪ್ಚಾ ಹಾಗೂ ಲಿಂಬು ಭಾಷೆಗಳನ್ನು 2ನೇ ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಈ ಪಟ್ಟಿಗೆ 7 ಭಾಷೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತಿದೆ.
ಹೊಸ ಆದೇಶದ ನಂತರ ಸರ್ಕಾರಿ ಶಾಲೆಗಳಲ್ಲದೆ, ಖಾಸಗಿ ಶಾಲೆಗಳು ಕೂಡಾ 11 ಭಾಷೆಗಳನ್ನು ಕಲಿಯುವ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತದೆ. ಹೊಸದಾಗಿ ತಮಂಗ್, ಗುರಂಗ್, ಮಂಗರ್, ಶೇರ್ಪಾ, ಮುಖಿಯಾ, ರಾಯ್, ನೇವಾರ್ ಭಾಷೆಗಳು ಸೇರ್ಪಡೆಗೊಳ್ಳಲಿವೆ. ಇವೆಲ್ಲವೂ ನೇಪಾಳ ದೇಶದ ಪ್ರಮುಖ ಪಂಗಡ/ಭಾಷೆಗಳಾಗಿರುವುದು ವಿಶೇಷ.
ಆದರೆ, ಸಿಕ್ಕಿಂನಲ್ಲಿ ತ್ರಿಭಾಷಾ ಕಲಿಕೆ ಸೂತ್ರ ಅನುಸರಿಸಲಾಗುತ್ತಿದೆ. ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಾರೋ ಆ ಮಾಧ್ಯಮದ ಭಾಷೆ ಮೊದಲ ಲ್ಯಾಂಗ್ವೇಜ್ ಎನಿಸಲಿದೆ. 2ನೇ ಭಾಷೆಯಾಗಿ 11 ಭಾಷೆಗಳ ಆಯ್ಕೆ ಸಿಗಲಿದೆ, ಹಿಂದಿ 3ನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.