ನವದೆಹಲಿ: ಇಡೀ ವಿಶ್ವಕ್ಕೇ ಮಾರಕವಾಗಿ ಪರಿಣಮಿಸಿರುವ ಮಹಾಮಾರಿ ಕೊರೊನಾ ವೈರಸ್'ಗೆ ಲಸಿಕೆ ನೀಡುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ – ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಎರಡು ಲಸಿಕೆಗಳನ್ನು ನಿರ್ಬಂಧಿತ ತುರ್ತು ಬಳಕೆಗೆ ದೇಶದ ಔಷಧ ನಿಯಂತ್ರಕ ಅನುಮೋದಿಸಿದ ಕೆಲ ದಿನಗಳ ನಂತರ ಲಸಿಕೆ ನೀಡಿಕೆಯ ಬಗ್ಗೆ ಮಹತ್ವದ ಸಭೆ ನಡೆಸಲಾಗುತ್ತಿದೆ. ಸಂಜೆ 4 ಗಂಟೆಗೆ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನಿಂದ ತಯಾರಿಸಲ್ಪಟ್ಟ ಕೋವಿಶೀಲ್ಡ್, ಶೇ 70ಕ್ಕಿಂತ ಅಧಿಕ ಪರಿಣಾಮಕಾರಿಯಾಗಿದೆ. ಕೊವಾಕ್ಸಿನ್ ಪ್ರಸ್ತುತ 3ನೇ ಹಂತದ ಪ್ರಯೋಗಗಳಲ್ಲಿದೆ. ಆದರೆ. ಇದು ಸುರಕ್ಷಿತವಾಗಿ ಮತ್ತು ದೃಢವಾಗಿ ರೋಗನಿರೋಧಕ ಪ್ರತಿಕ್ರಿಯೆ ನೀಡುತ್ತದೆ ಎಂದು ಔಷಧ ನಿಯಂತ್ರಕ ಕಳೆದ ವಾರವಷ್ಟೇ ಹೇಳಿತ್ತು.
ಈ ಎಲ್ಲಾ ಬೆಳವಣಿಗೆ ನಡುವೆ ಸೋಮವಾರ ಪ್ರಧಾನಿ ಮೋದಿಯವರು ಸಭೆ ನಡೆಸುವ ಹಿನ್ನೆಲೆಯಲ್ಲಿ ಲಸಿಕೆ ಕುರಿತಂತೆ ಯಾವೆಲ್ಲಾ ನಿರ್ಧಾರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ.