ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನದ ಸ್ಮರಣೋತ್ಸವ ಆಚರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
'ಜನವರಿ 23ರಿಂದ ಪ್ರಾರಂಭವಾಗುವ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ, ನಡೆಯಲಿರುವ ಚಟುವಟಿಕೆಗಳನ್ನು ಈ ಸಮಿತಿಯೇ ನಿರ್ಧರಿಸಲಿದೆ' ಎಂದು ಸಂಸ್ಕೃತಿ ಸಚಿವಾಲಯದ ಪ್ರಕಟಣೆ ಹೇಳಿದೆ.
ಈ ಸಮಿತಿಯು ವಿಶೇಷ ನಾಗರಿಕರು, ಇತಿಹಾಸಕಾರರು, ಲೇಖಕರು, ತಜ್ಞರು, ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಸದಸ್ಯರು ಮತ್ತು ಆಜಾದ್ ಹಿಂದ್ ಫೌಜ್‌ಗೆ (ಐಎನ್‌ಎ) ಸಂಬಂಧಿಸಿದ ಪ್ರಖ್ಯಾತ ವ್ಯಕ್ತಿಗಳನ್ನು ಒಳಗೊಂಡಿದೆ.
'ದೆಹಲಿ, ಕೋಲ್ಕತ್ತ ಸೇರಿದಂತೆ ದೇಶ ಮತ್ತು ವಿದೇಶದ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು' ಎಂದು ಪ್ರಕಟಣೆ ತಿಳಿಸಿದೆ.