ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, 146 ಜಿಲ್ಲೆಗಳಲ್ಲಿ ಕಳೆದ ಏಳು ದಿನಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ಹೇಳಿದರು.
21 ಜಿಲ್ಲೆಗಳಲ್ಲಿ ಕಳೆದ 28 ದಿನದಿಂದ, ಆರು ಜಿಲ್ಲೆಗಳಲ್ಲಿ ಕಳೆದ 21 ದಿನದಿಂದ ಹಾಗೂ 18 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿಲ್ಲ. ದೇಶದಲ್ಲಿ ಇಲ್ಲಿಯವರೆಗೂ 19.5 ಕೋಟಿ ಕೋವಿಡ್-19 ಪರೀಕ್ಷೆಗಳನ್ನು ಮಾಡಿರುವುದೇ ಪ್ರಕರಣಗಳ ಸಂಖ್ಯೆ ಇಳಿಕೆಯಾಗಲು ಕಾರಣ ಎಂದು ಕೋವಿಡ್-19 ಕುರಿತ ಉನ್ನತ ಮಟ್ಟದ ಸಚಿವರ ತಂಡದ ಜೊತೆ ನಡೆಸಿದ 23ನೇ ಸಭೆಯ ವೇಳೆ ಹರ್ಷವರ್ಧನ್ ತಿಳಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
'ದೇಶದಲ್ಲಿ ಪ್ರತಿನಿತ್ಯ 12 ಲಕ್ಷ ಪರೀಕ್ಷೆಗಳು ನಡೆಯುತ್ತಿದ್ದು, ಕಳೆದ 24 ಗಂಟೆಯಲ್ಲಿ 12 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.73 ಲಕ್ಷಕ್ಕೆ ಇಳಿಕೆಯಾಗಿದೆ. ಈ ಪೈಕಿ ಶೇ 0.46 ಜನರಷ್ಟೇ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ 2.20 ಜನರು ಐಸಿಯುನಲ್ಲಿ ಹಾಗೂ ಶೇ 3.02 ಜನರಿಗೆ ಕೃತಕ ಆಮ್ಲಜನಕ ಅಳವಡಿಸಲಾಗಿದೆ' ಎಂದು ಹರ್ಷವರ್ಧನ್ ಹೇಳಿದರು.
'ಬ್ರಿಟನ್‌ನಲ್ಲಿ ಮೊದಲು ಕಾಣಿಸಿಕೊಂಡ ರೂಪಾಂತರಗೊಂಡ ವೈರಾಣು ದೇಶದಲ್ಲಿ 165 ಜನರಲ್ಲಿ ಪತ್ತೆಯಾಗಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ' ಎಂದರು.
'ಮುಂಬೈ, ತಿರುವನಂತಪುರ, ಎರ್ನಾಕುಳಂ, ಕೋಟ್ಟಯಂ, ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಪ್ರಸ್ತುತ ಹೆಚ್ಚಿನ ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ 70 ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿವೆ' ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ.ಸುಜೀತ್ ಕೆ.ಸಿಂಗ್ ಸಭೆಗೆ ಮಾಹಿತಿ ನೀಡಿದರು.