ಮಂಜೇಶ್ವರ: ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ 15 ನೇ ಯೋಜನೆಯ ಮೊತ್ತವನ್ನು ಮಿಂಜ ಗ್ರಾಮ ಪಂಚಾಯತಿಯ ಮದಂಗಲ್ಲುಕಟ್ಟೆ ನಿವಾಸಿ ದಿ. ಗುರುವಪ್ಪ ಆಚಾರ್ಯ - ಭವಾನಿ ದಂಪತಿ ಪುತ್ರಿ, ಇಂದು (ಜ. 7) ವಿವಾಹಿತರಾಗುವ ರೇಣುಕಾ ಎಂಬ ವಧುವಿಗೆ ಮಾಂಗಲ್ಯಭಾಗ್ಯ ಯೋಜನೆಯಂಗವಾಗಿ ನೀಡಲಾಯಿತು.
ಯೋಜನೆಯ ಮೊತ್ತವನ್ನು ಟ್ರಸ್ಟ್ ನ ಸದಸ್ಯ, ತುಳುನಾಡ ಸಂಘಟಕ, ಬೆಂಗಳೂರು ಸೃಷ್ಟಿ ಕಲಾಭೂಮಿಯ ಸಂಸ್ಥಾಪಕ ಮಂಜುನಾಥ ಅಡಪ ಸಂಕಬೈಲ್ ವಧುವಿಗೆ ನೀಡುವ ಮೂಲಕ ವಿತರಿಸಿ, ಮುಂದಿನ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು. ಈ ವೇಳೆ ಶ್ರೀ ಕಟಿಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ರತನ್ ಕುಮಾರ್ ಹೊಸಂಗಡಿ, ಪ್ರಧಾನ ಸಂಚಾಲಕ ಜಯ ಮಣಿಯಂಪಾರೆ, ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ವರ್ಕಾಡಿ, ಸದಸ್ಯ ರವಿರಾಜ್ ತಲೇಕಳ, ಜಯಪ್ರಶಾಂತ್ ಪಾಲೆಂಗ್ರಿ, ದೇವದಾಸ್ ಬೆಜ್ಜ, ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ಮಿಂಜ ಪ್ರಖಂಡದ ಸೌಮ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಮಿಂಜ ಗ್ರಾಮ ಪಂಚಾಯತಿಗೊಳಪಟ್ಟ ಮೀಯಪದವು ಬಳಿಯ ಮದಂಗಲ್ಲುಕಟ್ಟೆ ನಿವಾಸಿ ಗುರುವಪ್ಪ ಆಚಾರ್ಯ- ಭವಾನಿ ದಂಪತಿಯ ಪ್ರಥಮ ಪುತ್ರಿ ರೇಣುಕಾ ಹಾಗೂ ದ್ವಿತೀಯ ಪುತ್ರಿ ಲಲಿತಾ ಎಂಬವರ ಜೊತೆ ಜೀವನ ಸಾಗಿಸುತ್ತಿದ್ದರು. ಗುರುವಪ್ಪ ಆಚಾರ್ಯರು ಜಾತ್ರೆ ಹಾಗೂ ಇನ್ನಿತರ ಉತ್ಸವಗಳಲ್ಲಿ ಚರುಮುರಿ ಮಾರಿ ಹಾಗೂ ಪತ್ನಿ ಭವಾನಿ ಬೀಡಿ ಕಟ್ಟಿ ಸಿಗುವ ಅಲ್ಪ ಮೊತ್ತವೆ ಈ ಕುಟುಂಬದ ನಿತ್ಯ ಜೀವನಕ್ಕೆ ಆದಾಯ. ಪುತ್ರಿಯರಿಬ್ಬರು ಬೀಡಿ ಹಾಗೂ ಕೂಲಿ ಕೆಲಸಗಳಿಗೆ ತೆರಳಿ ಮನೆಯವರಿಗೆ ನೆರವಾಗುತ್ತಿದ್ದರು. ಇತ್ತೀಚೆಗೆ 5 ವರ್ಷದ ಹಿಂದೆ ಹೃದಯಾಘಾತದಿಂದ ಗುರುವಪ್ಪ ಆಚಾರ್ಯರು ನಿಧನರಾದರು. ಬಳಿಕ ಇವರ ಜೀವನ ದುಸ್ತರವಾಯಿತು. ಮನೆಯ ಸೂತ್ರಧಾರನ ನಿಧನದ ಬಳಿಕ ದಿಕ್ಕೇ ತೋಚದಂತಾದ ಕುಟುಂಬದಲ್ಲಿ ಪತ್ನಿ ಭವಾನಿಯವರು ಮಾನಸಿಕವಾಗಿ ಕುಗ್ಗಿ ಹೋದರು. ಬಳಿಕ ಅಸೌಖ್ಯವುಂಟಾಗಿ ಮಾನಸಿಕ ಅವಸ್ಥೆಗೆ ತಳ್ಳಲ್ಪಟ್ಟರು. ಇವರ ನಿತ್ಯದ ಆರೈಕೆ ಈ ಇಬ್ಬರು ಪುತ್ರಿಯರ ಮೇಲಾಯಿತು. ಅವಿವಾಹಿತರಾದ ಈ ಇಬ್ಬರು ಕೂಲಿ ಕೆಲಸ / ಬೀಡಿ ಕಟ್ಟಿ ತಾಯಿಯ ಆರೈಕೆ ಜೊತೆ ನಿತ್ಯ ಜೀವನ ಸಾಗಿಸುತ್ತಿದ್ದರು. ಈ ಇಬ್ಬರೂ ಪ್ರಾಯಪ್ರಬುದ್ಧರಾಗಿದ್ದು, ಹಿರಿಯವಳಾದ ರೇಣುಕಾರನ್ನು ಉಡುಪಿ ಅಲೆವೂರು ನಿವಾಸಿ ರಾಘವರಿಗೆ ವಿವಾಹ ಮಾಡಲು ಇತ್ತೀಚೆಗೆ ವಿವಾಹ ನಿಶ್ಚಯಿಸಿ, ಇಂದು ಶುಭ ಮುಹೂರ್ತದಲ್ಲಿ ವಿವಾಹ ನಡೆಯಲಿದೆ.