ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವಭಾವಿಯಾಗಿ ಬಿಜೆಪಿ ರಾಜ್ಯಾದ್ಯಂತ ರಾಜಕೀಯ ಸ್ಪಷ್ಟೀಕರಣ ಯಾತ್ರೆ ನಡೆಸಲು ತೀರ್ಮಾನಿಸಿದೆ. ಬಿಜೆಪಿ ರಆಜ್ಯ ಸಮಿತಿ ಅಧ್ಯಕ್ಷ ಕೆ. ಸಉರೇಂದ್ರನ್ ನೇತೃತ್ವದಲ್ಲಿ ಫೆ. 15ರಿಂದ ಮಂಜೇಶ್ವರದಿಂದ ಆರಂಭಿಸಿ ಮಾ. 15ರಂದು ತಿರುವನಂತಪುರದ ಪಾರಶ್ಯಾಲೆಯಲ್ಲಿ ಸಂಪನ್ನಗೊಳ್ಳಲಿದೆ.
ಪ್ರತಿದಿನ ಯಾತ್ರೆ ಬೆಳಗ್ಗೆ ಆರಂಭಗೊಂಡು ಸಾಯಂಕಾಲ ವರೆಗೆ ನಡೆಯಲಿದ್ದು, ಆಯ್ದ ಪ್ರಮುಖ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಬಿಜೆಪಿ ಕೇಂದ್ರ ನೇತೃಥ್ವದ ನಿರ್ದೇಶದನ್ವಯ ಯಾತ್ರೆ ನಡೆಸಲಾಗುವುದು. ಯಾತ್ರೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ, ಸೇರಿದಂತೆ ಪ್ರಮುಖ ನೇತಾರರನ್ನು ಪಾಲ್ಗೊಳ್ಳಿಸಲು ಪಕ್ಷ ತೀರ್ಮಾನಿಸಿದೆ. ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಹಾಗೂ ಸಿಪಿಎಂ ನೇತೃತ್ವದ ಎಡರಂಗ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ನಡೆಸುತ್ತಿರುವ ಸುಳ್ಳು ಪ್ರಚಾರ ಹಾಗೂ ಎಡರಂಗ ಸರ್ಕಾರದ ಜನದ್ರೋಹಕರ ನೀತಿ, ಭ್ರಷ್ಟಾಚಾರಗಳ ಬಗ್ಗೆಯೂ ಯಾಥ್ರೆಯಲ್ಲಿ ಸ್ಪಷ್ಟನೆ ನೀಡಲು ಬಿಜೆಪಿ ತಯಾರಿ ನಡೆಸಿದೆ. ಯಾತ್ರೆಯಲ್ಲಿ ವಿವಿಧ ಮತೀಯ, ಜಾತೀಯ ಸಂಘಟನೆಗಳ ಮುಖಂಡರೊಂದಿಗೂ ಚರ್ಚೆ, ಸಮಾಲೋಚನೆ ನಡೆಸುವುದು, ಚುನಾವಣೆಗೆ ಡಿಜಿಟಲ್ ಪ್ರಚಾರ ಕೈಗೊಳ್ಳುವ ಬಗ್ಗೆಯೂ ಪಕ್ಷ ತೀರ್ಮಾನ ಕೈಗೊಂಡಿದೆ.