ಕಾಸರಗೋಡು:ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಪಾವತಿಸುವವರೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ವಯ ಧನಸಹಾಯ ಪಡೆದುಕೊಂಡಿರುವುದನ್ನು ತನಿಖೆಯಿಂದ ಪತ್ತಹಚ್ಚಲಾಗಿದ್ದು, ಈ ಮೊತ್ತ ವಾಪಾಸು ಪಡೆಯಲು ಕ್ರಮ ಆರಂಭಿಸಲಾಗಿದೆ. ಯೋಜನೆ ಫಲಾನುಭವಿಗಳಾಗಲು ಅರ್ಹತೆಯಿಲ್ಲದ 15163ಮಂದಿ ಕೇರಳದಲ್ಲಿದ್ದು, ಈ ಮೊತ್ತವನ್ನು ಅವರಿಂದ ವಾಪಾಸುಪಡೆಯಲು ಕೇರಳ ರಾಜ್ಯ ಕೃಷಿ ಇಲಾಖೆ ಮುಂದಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅನಧಿಕೃತವಾಗಿ ಹಣ ಪಡೆದುಕೊಂಡವರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಯೋಜನೆ ಅನರ್ಹರ ಪಾಲಾಗುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ತಮಿಳ್ನಾಡಿನಲ್ಲಿ ಯೋಜನೆ ಹೆಸರಲ್ಲಿ ಫಲಾನುಭವಿಗಳನ್ನು ವಂಚಿಸಿ ಮಧ್ಯವರ್ತಿಗಳು, ಕೃಷಿ ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳ ಸಹಿತ ಹಲವರು ಹಣ ಎಗರಿಸಿರುವ ಪ್ರಕರಣ ಹೊರಬರುತ್ತಿದ್ದಂತೆ ಇತರ ರಾಜ್ಯಗಳಲ್ಲೂ ವ್ಯಾಪಕ ತನಿಖೆಗೆ ಕೇಂದ್ರ ಮುಂದಾಗಿದೆ. ಯೋಜನೆಯನ್ವಯ ಗರಿಷ್ಠ ಎರಡು ಹೆಕ್ಟರ್ ಕೃಷಿಭೂಮಿ ಹೊಂದಿರುವ ಕೃಷಿಕರಿಗೆ ವರ್ಷಕ್ಕೆ ಆರು ಸಾವಿರ ರೂ. ಧನಸಹಾಯ ನೀಡುತ್ತಿದ್ದು, ಇದನ್ನು ಮೂರು ತಿಂಗಳಿಗೆ ಒಂದು ಬಾರಿ ತಲಾ 2ಸಾವಿರದಂತೆ ವಿತರಿಸಲಾಗುತ್ತಿದೆ.2019 ಫೆ, 24ರಿಂದ ಯೋಜನೆ ಆರಂಭಗೊಂಡಿದ್ದರೂ, 2018 ಡಿಸೆಂಬರ್ ತಿಂಗಳಿಂದ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸಲಾಗಿತ್ತು.
ಪ್ರಸಕ್ತ ಕೇರಳದಲ್ಲಿ 36.7ಲಕ್ಷ ಫಲಾನುಭವಿಗಳಿದ್ದಾರೆ. ಕೇರಳ ರಾಜ್ಯದಲ್ಲಿ ಅರ್ಹತೆಯಿಲ್ಲದಿದ್ದರೂ, ಹಣಪಡೆದುಕೊಂಡವರಲ್ಲಿ ಅತಿ ಹೆಚ್ಚು 2384ಮಂದಿ ತೃಶ್ಯೂರ್ ಜಿಲ್ಲೆಯಲ್ಲಿದ್ದರೆ, ಅತಿ ಕಡಿಮೆ614ಮಂದಿ ಕಾಸರಗೋಡು ಜಿಲ್ಲೆಯಲ್ಲಿದ್ದಾರೆ. ತಿರುವನಂತಪುರದಲ್ಲಿ 856, ಕೊಲ್ಲಂನಲ್ಲಿ 899, ಕೋಟ್ಟಾಯಂನಲ್ಲಿ 1250, ಪತ್ತನಂತಿಟ್ಟ 574, ಇಡುಕ್ಕಿ 636, ಆಲಪ್ಪುಯ 1530, ಎರ್ನಾಕುಳಂ 2079, ಪಾಲಕ್ಕಾಡ್ 1435, ಮಲಪ್ಪುರಂ 624, ಕೋಯಿಕ್ಕೋಡ್ 788, ಕಣ್ಣೂರು 825 ಹಾಗೂ ವಯನಾಡಿನಲ್ಲಿ 642ಮಂದಿಯಿರುವುದನ್ನು ಪತ್ತೆಹಚ್ಚಲಾಗಿದೆ.