ಕಾಸರಗೋಡು: ಕೋವಿಡ್ 19 ವಾಕ್ಸಿನ್ ನೀಡಿಕೆಗೆ ಕಾಸರಗೋಡು ಜಿಲ್ಲೆ ಸಿದ್ಧವಾಗಿದೆ. ಜ.16ರಂದು 9 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ನಡೆಯಲಿದೆ.
ಜಿಲ್ಲೆಯಲ್ಲಿ ಜ.16ರಂದು 9 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತಿಗೆ ಕೋವಿಡ್ 19 ವಾಕ್ಸಿನ್ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ಜನರಲ್ ಆಸ್ಪತ್ರೆ, ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಮಂಗಲ್ಪಾಡಿ, ಬೇಡಡ್ಕ, ನೀಲೆಶ್ವರ, ಪನತ್ತಡಿ ತಾಲೂಕು ಆಸ್ಪತ್ರೆಗಳು, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಎಣ್ಣಪ್ಪಾರೆ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದ ಕೋವಿಡ್ ವಾಕ್ಸಿನೇಷನ್ ನಡೆಸಲಾಗುವುದು.
ದ್ವಿತೀಯ ಹಂತದಲ್ಲಿ ಲಸಿಕೆ ನೀಡಿಕೆ ಸಂಬಂಧ ಈ 9 ಕೇಂದ್ರಗಳ ಸಹಿತ ಜಿಲ್ಲೆಯ 58 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ 329 ಕೇಂದ್ರಗಳನ್ನು ಆರಿಸಲಾಗಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಹಂತದ ನೀಡಿಕೆಗೆ ಲಸಿಕೆ ಜ.14ರಂದು ಲಭ್ಯವಾಗಲಿದೆ. ಪ್ರತಿ ಕೇಂದ್ರದಲ್ಲೂ 4 ವಾಕ್ಸಿನೇಷನ್ ಅಧಿಕಾರಿಗಳೂ, 3 ವಾಕ್ಸಿ ನೇಟರ್ ಗಳೂ ಇರುವರು. ಜತೆಗೆ ಎರಡು ಪಾಳಿಗಳಲ್ಲಿ ಇಬ್ಬರು ವೈದ್ಯರನ್ನು ನೇಮಿಸಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ವಾಕ್ಸಿನ್ ನೀಡಿಕೆ ಜರುಗಲಿದೆ. ಜಿಲ್ಲೆಯ ವಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳ ಅವಲೋಕನ ನಡೆಸುವ ಹೊಣೆಯನ್ನು ಜಿಲ್ಲಾ ಮಟ್ಟದ ಸಿಬ್ಬಂದಿಗೆ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಈ ಸಂಬಂಧ ನಡೆದ ಪೂರ್ಣಭಾವಿ ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್, ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.