ಜಿನಿವಾ (ಸ್ವಿಜರ್ಲಾಂಡ್): ಫೈಜರ್-ಬಯೋಎನ್ ಟೆಕ್ ಲಸಿಕೆಗೆ ತುರ್ತು ಬಳಕೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಈ ಮೂಲಕ ಲಸಿಕೆಯನ್ನು ಆದಷ್ಟು ಶೀಘ್ರವೇ ಆಮದು ಮಾಡಿಕೊಂಡು ವಿತರಿಸಲು ದೇಶಗಳಿಗೆ ಅವಕಾಶವನ್ನು ಮಾಡಿಕೊಟ್ಟಿದೆ.
ಯುಎಸ್-ಜರ್ಮನ್ ಲಸಿಕೆಯೊಂದಿಗೆ ಕಳೆದ ಡಿಸೆಂಬರ್ 8 ರಂದು ಬ್ರಿಟನ್ ತನ್ನ ರೋಗಾಣು ವಿರುದ್ಧ ಹೋರಾಡುವ ಲಸಿಕೆಯನ್ನು ಪ್ರಾರಂಭಿಸಿತು, ಅಮೆರಿಕ, ಕೆನಡಾ ಮತ್ತು ಐರೋಪ್ಯ ಒಕ್ಕೂಟ ದೇಶಗಳು ಇದನ್ನು ಅನುಸರಿಸುತ್ತವೆ.
ಕಳೆದ ವರ್ಷ ಚೀನಾದಲ್ಲಿ ಕೊರೋನವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ ನಂತರ ಅದರ ವಿರುದ್ಧ ಹೋರಾಡಲು ಫೈಜರ್/ಬಯೋಎನ್ ಟೆಕ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲ ಬಾರಿಗೆ ಅನುಮತಿ ನೀಡುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ಕೋವಿಡ್-19 ಲಸಿಕೆ ಲಭ್ಯವಾಗಲು ಧನಾತ್ಮಕ ಮಟ್ಟದಲ್ಲಿ ಹೆಜ್ಜೆಯಿಡಲು ಮಹತ್ವದ ಬೆಳವಣಿಗೆಯಾಗಿದೆ. ಜನಸಂಖ್ಯೆಗಳಿಗನುಗುಣವಾಗಿ ಕೋವಿಡ್-19 ಲಸಿಕೆ ದೊರಕಲು ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಅಧಿಕಾರಿ ಮರಿಯಂಜೆಲಾ ಸಿಮಾವೊ ತಿಳಿದ್ದಾರೆ.
ತುರ್ತು ಬಳಕೆಯ ಪಟ್ಟಿಯು ವಿವಿಧ ದೇಶಗಳಲ್ಲಿನ ನಿಯಂತ್ರಕರಿಗೆ ಲಸಿಕೆಯ ಆಮದು ಮತ್ತು ವಿತರಣೆಯನ್ನು ಅನುಮೋದಿಸಲು ದಾರಿ ತೆರೆಯುತ್ತದೆ. ಕೋವಿಡ್ ನಿಯಂತ್ರಣ ಲಸಿಕೆಗಳನ್ನು ವಿತರಿಸುವಲ್ಲಿ ಪ್ರಮುಖ ವ್ಯವಸ್ಥಾಪಕ ಪಾತ್ರವನ್ನು ವಹಿಸುವ ಯುನಿಸೆಫ್ ಮತ್ತು ಅಗತ್ಯವಿರುವ ದೇಶಗಳಿಗೆ ಲಸಿಕೆ ಸಂಗ್ರಹಿಸಲು ಪ್ಯಾನ್-ಅಮೇರಿಕನ್ ಆರೋಗ್ಯ ಸಂಸ್ಥೆ ಸಹ ಶಕ್ತಗೊಳಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಫೈಜರ್ / ಬಯೋಎನ್ ಟೆಕ್ ಲಸಿಕೆಯ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟದ ಅಂಕಿಅಂಶವನ್ನು ಪರಿಶೀಲಿಸಲು ವಿಶ್ವ ಆರೋಗ್ಯ ಸಂಸ್ಥೆ ತಜ್ಞರನ್ನು ವಿಶ್ವದ ಹಲವು ಕಡೆಗಳಿಂದ ಕರೆದು ಅಪಾಯಗಳ ವಿರುದ್ಧದ ಪ್ರಯೋಜನಗಳನ್ನು ತಾಳೆಹಾಕಿ ನೋಡಲಿದೆ ಎಂದು ಹೇಳಿದೆ.