ನವದೆಹಲಿ: ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫರ್ಡ್ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ತುರ್ತು ಬಳಕೆಗೆ ರಾಷ್ಟ್ರೀಯ ಔಷಧ ನಿಯಂತ್ರಕದ ತಜ್ಞರ ಸಮಿತಿ ಅನುಮತಿ ನೀಡಿದೆ ಎಂದು ಶುಕ್ರವಾರ ಮೂಲಗಳು ತಿಳಿಸಿವೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಕೋವಿಶೀಲ್ಡ್ ತಯಾರಿಸಲು ಆಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಬ್ರಿಟನ್ ನ ಔಷಧ ಹಾಗೂ ಆರೋಗ್ಯ ಸೇವೆಗಳ ನಿಯಂತ್ರಣ ಮಂಡಳಿಯು ಬುಧವಾರ ಸೆರಂ ಇನ್ ಸ್ಟಿಟ್ಯೂಟ್ ನ ಆಕ್ಸ್ ಫರ್ಡ್ ಆಸ್ಟ್ರಾಜೆನೆಕಾ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ, ಭಾರತದಲ್ಲೂ ತುರ್ತು ಬಳಕೆಗೆ ಅನುಮತಿ ನೀಡಲು ತಜ್ಞರ ಸಮಿತಿ ನಿರ್ಧರಿಸಿದೆ.
ಭಾರತದಲ್ಲಿ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಹಾಗೂ ಲಸಿಕೆ ತಯಾರಿಸಲು ಸೆರಮ್ ಇನ್ ಸ್ಟಿಟ್ಯೂಟ್ ಬ್ರಿಟನ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಲಸಿಕೆಯ ತುರ್ತು ಅನುಮೋದನೆಗೆ ಸಂಬಂಧಿಸಿದಂತೆ ಡಿಸೆಂಬರ್ 9ರಂದು ಅರ್ಜಿ ಪರಿಶೀಲಿಸಿದ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿ, ಲಸಿಕೆ ತಯಾರಕ ಕಂಪನಿಗಳಿಂದ ವೈದ್ಯಕೀಯ ಪ್ರಯೋಗಗಳ ಕುರಿತು ಹೆಚ್ಚುವರಿ ಅಂಕಿ ಅಂಶಗಳನ್ನು ಕೇಳಿತ್ತು. ಡಿಸೆಂಬರ್ 24ರಂದು ಸೆರಂ ಸಂಸ್ಥೆ ಮಾಹಿತಿಯನ್ನು ಒದಗಿಸಿತ್ತು.